ಲೋಕಬಂಧು ನ್ಯೂಸ್ | ಉಡುಪಿ, ಆ.20
ಈ ಯುಗದ ದೊಡ್ಡ ಜ್ಞಾನಿ ಕೃತಕ ಬುದ್ಧಿಮತ್ತೆ (ಎಐ). ಅದು ನಮಗೆ ನಮ್ರತೆಯನ್ನು ಕಲಿಸಿಕೊಡುತ್ತದೆ. ಅದನ್ನು ನಾವು ಮೈಗೂಡಿಸಿಕೊಳ್ಳಬೇಕು. ಸದ್ಯ ಫೋಟೊಗ್ರಫಿ ಕ್ಷೇತ್ರದಲ್ಲಿ ಎಐ ಬಂಧನ ಎನಿಸಿದರೂ ಅದನ್ನು ಮೀರಿದರೆ ಅದು ನಂದನ ಆಗುವುದರಲ್ಲಿ ಎರಡೂ ಮಾತಿಲ್ಲ. ಎಐನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುವಂತೆ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್'ನ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಸತ್ಯಬೋಧ ಜೋಶಿ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಅವರು ಸದಸ್ಯರ ಸುದ್ದಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ಡಿಜಿಟಲ್- ಎಐ ಅಡಕತ್ತರಿ ನಡುವೆ ಛಾಯಾಗ್ರಹಣ' ವಿಷಯ ಕುರಿತು ಉಪನ್ಯಾಸ ನೀಡಿದರು.
ಫೋಟೊಗ್ರಫಿಯಲ್ಲಿನ ಹೊಸ ಹೊಸ ತಂತ್ರಜ್ಞಾನ ನಮಗೆ ಹೊಸ ಜವಾಬ್ದಾರಿಯನ್ನು ನೀಡುತ್ತದೆ. ಇದೀಗ ಬಂದಿರುವ ಎಐ ಕೂಡಾ ನಮಗೆ ಹೊಸತನ್ನು ಕಲಿಯಲು ಸವಾಲು ನೀಡುತ್ತಿದೆ. ಎಐ ಸರಿಯಾಗಿ ಬಳಸಿಕೊಂಡರೆ ಅನುಕೂಲಗಳೇ ಜಾಸ್ತಿ. ಎಐ 10 ಹೆಜ್ಜೆ ಮುಂದಿಟ್ಟರೆ ನಾವು 100 ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ. ಇದೇ ನಮ್ಮ ಮುಂದಿರುವ ಸವಾಲು ಎಂದರು.
ಕೃತಕ ಬುದ್ಧಿಮತ್ತೆ ಮೂಲಕ ನಮಗೆ ಕಡಿಮೆಯಾಗಿರುವ ಸಿಗುವ ತಂತ್ರಜ್ಞಾನದ ಹಿಂದೆ ಬಹಳ ದೊಡ್ಡ ಬಂಡವಾಳ ಇದೆ. ಇದು ಮುಂದಿನ ಹಂತ ತಲುಪಿದ ಬಳಿಕ ಸಾಕಷ್ಟು ದುಬಾರಿ ಆಗುತ್ತಾ ಹೋಗುತ್ತದೆ. ಯಾವುದೇ ರೀತಿಯ ತಂತ್ರಜ್ಞಾನ ಬಂದರೂ ಅದನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಿತ್ಯ ಪ್ರಯತ್ನದಿಂದ ಮಾತ್ರ ಗಟ್ಟಿಯಾಗಿರಲು ಸಾಧ್ಯ. ಇದು ಫೋಟೋಗ್ರಫಿ ಕ್ಷೇತ್ರಕ್ಕೆ ಮುಖ್ಯವಾಗಿ ಅನ್ವಯಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲ ಮಾಹೆ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ನಿರ್ದೇಶಕ ಭರತ್ ಕುಮಾರ್, ಛಾಯಾಗ್ರಹಣ ಎಂಬುದು ಕಾಲಚಕ್ರವನ್ನು ಒಂದು ಕ್ಷಣ ತಡೆಹಿಡಿದು ನಿಲ್ಲಿಸುವ ಪ್ರಕ್ರಿಯೆಯಾಗಿದೆ. ಇಂದು ಕಾಲ ಬದಲಾಗಿ ಹೊಸಹೊಸ ತಂತ್ರಜ್ಞಾನಗಳು ಬಂದರೂ ಫೋಟೊಗ್ರಫಿಯ ಮೂಲ ತತ್ವ ಬದಲಾಗಿಲ್ಲ. ಅದು ಕತ್ತಲಿನಿಂದ ಬೆಳಕಿಗೆ ಬರುವ ಕ್ರಿಯೆಯಾಗಿದೆ ಎಂದರು.
ಫೋಟೊಗ್ರಫಿ ಹಾಗೂ ಪತ್ರಿಕೋದ್ಯಮಗಳಿಗೆ ವೃತ್ತಿ ಸಂಹಿತೆ ಎಂಬುದಿದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಆಲೋಚನಾ ಕ್ರಮ ಮನುಷ್ಯನಲ್ಲಿದೆಯೇ ಹೊರತು ಯಂತ್ರದಲ್ಲಿಲ್ಲ. ಹಾಗಾಗಿ ಯಂತ್ರಗಳನ್ನು ಬಳಸುವವರು ವೃತ್ತಿ ಸಂಹಿತೆಯನ್ನು ಗಟ್ಟಿಯಾಗಿ ಪಾಲಿಸಬೇಕಾಗುತ್ತದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಚೇತನ್ ಮಟಪಾಡಿ ನಿರೂಪಿಸಿ, ಅಜಿತ್ ಆರಾಡಿ ವಂದಿಸಿದರು.
.jpg)
.jpg)