ಲೋಕಬಂಧು ನ್ಯೂಸ್ | ಬೆಂಗಳೂರು, ಆ.19
ಒಕ್ಕೂಟ ವ್ಯವಸ್ಥೆಯ ಯಾವುದೇ ರಾಜ್ಯ ಇನ್ನೊಂದು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಪನ್ವೀರ್ ಸೆಲ್ವಂ ಆಗಲಿ ಅಥವಾ ಯಾರೇ ಆಗಲಿ ಅವರಿಗೆ ಕನಿಷ್ಠ ಸಂಸ್ಕೃತಿ ಇರಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಹನೂರು ಶೂಟೌಟ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ತಮಿಳುನಾಡು ಮಾಜಿ ಸಿಎಂ ಪನ್ವೀರ್ ಸೇಲ್ವಂ ಅವರ ಹೇಳಿಕೆ ಬಗ್ಗೆ ಕೇಳಿದಾಗ, ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲಿ ನಾನು ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.
ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸಮಸ್ಯೆ ಇರುತ್ತದೆ. ಅದನ್ನು ಅವರೂ ತಿಳಿದುಕೊಳ್ಳಬೇಕು. ನಮ್ಮ ರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಅವರು ತಮ್ಮ ಕೆಲಸ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ನಾನು ಬಯಸುವುದಿಲ್ಲ. ನಮ್ಮ ರಾಜ್ಯಕ್ಕಿರುವ ಪಾವಿತ್ರ್ಯತೆಯನ್ನು ನಾವು ಕಾಪಾಡಿಕೊಳ್ಳಬೇಕು, ರಕ್ಷಿಸಬೇಕು ಎಂದರು.
ಪ್ರಕರಣದ ತನಿಖೆ ಆಗಬೇಕು ಎಂದು ತಮಿಳುನಾಡು ಸಿಎಂ ವಿಜಯ್ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಇದು ಸಾಮಾನ್ಯ ಚರ್ಚೆ ಎಂದರು.
