ನಿರ್ಬಂಧದ ಮೂಲಕ ರಾಷ್ಟ್ರೀಯ ಏಕತೆಯ ವಿಚಾರ ಹತ್ತಿಕ್ಕಲು ಅಸಾಧ್ಯ

ಲೋಕಬಂಧು ನ್ಯೂಸ್ ಕಾಪು, ಆ.13
ಶಿರ್ವದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಬೇಕಿದ್ದ ಮಂಗಳೂರು ವಿಭಾಗದ ಬಜರಂಗದಳದ ಪ್ರಮುಖ್ ಪುನೀತ್ ಅತ್ತಾವರ ಅವರನ್ನು ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವ ಉಡುಪಿ ಜಿಲ್ಲಾಡಳಿತದ ಕ್ರಮವನ್ನು ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಖಂಡಿಸಿದ್ದಾರೆ.ಅಖಂಡ ಭಾರತ ಸಂಕಲ್ಪ ದಿನ ದೇಶದ ಏಕತೆ, ಅಖಂಡತೆ, ರಾಷ್ಟ್ರಭಕ್ತಿ ಹಾಗೂ ರಾಷ್ಟ್ರೀಯ ಜಾಗೃತಿಯ ಸಂದೇಶ ಸಾರುವ ಕಾರ್ಯಕ್ರಮವಾಗಿದೆ. ಇಂಥ ಶಾಂತಿಯುತ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಸಂಘಟನೆಯ ಪ್ರಮುಖರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದು ಜಿತೇಂದ್ರ ಶೆಟ್ಟಿ ಪತ್ರಿಕಾ‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಜಿಲ್ಲಾಡಳಿತ ಕಾನೂನು ಮತ್ತು ಸುವ್ಯವಸ್ಥೆ ಹೆಸರಿನಲ್ಲಿ ಶಾಂತಿಯುತವಾಗಿ ನಡೆಯುವ ಕಾರ್ಯಕ್ರಮಗಳಿಗೆ ಇಂಥ ನಿರ್ಬಂಧ ಹೇರುವ ಮೂಲಕ ಸಂಘಟನೆಯ ಕಾರ್ಯಕರ್ತರ ಹಕ್ಕುಗಳನ್ನು ಕುಂಠಿತಗೊಳಿಸಲು ಯತ್ನಿಸುತ್ತಿದೆ.


ಆದ್ದರಿಂದ ಈಗಾಗಲೇ ವಿಧಿಸಲಾಗಿರುವ ನಿರ್ಬಂಧವನ್ನು ಮರುಪರಿಶೀಲಿಸಿ‌ ಕೂಡಲೇ ಹಿಂಪಡೆಯಬೇಕು ಹಾಗೂ ಅಖಂಡ ಭಾರತ ಸಂಕಲ್ಪ ದಿನದಂಥ ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಕಾರ್ಯಕ್ರಮಗಳು ಅಡೆತಡೆಗಳಿಲ್ಲದೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕು ಎಂದವರು ಆಗ್ರಹಿಸಿದ್ದಾರೆ.


ನಿರ್ಬಂಧಗಳ ಮೂಲಕ ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ವಿಚಾರಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದೂ ಜಿತೇಂದ್ರ ಶೆಟ್ಟಿ ಉದ್ಯಾವರ ಎಚ್ಚರಿಕೆ ನೀಡಿದ್ದಾರೆ.