ಲೋಕಬಂಧು ನ್ಯೂಸ್ | ಉಡುಪಿ, ಆ.2
ಹಲವಾರು ಸಾಧು-ಸಂತರಂತೆ ಮಹಾಂತ ಡಾ.ಶಿವಯೋಗಿ ಸಾಮೀಜಿ ವ್ಯಸನಮುಕ್ತ ಸಮಾಜದ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಲು ನೀಡಿದ ಪ್ರೇರಣೆಯನ್ನು ಯುವಜನರು ಅನುಸರಿಸಿ ಸನ್ಮಾರ್ಗದಲ್ಲಿ ನಡೆದು ಬದುಕು ಸುಂದರವಾಗಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ನಗರದ ನೇತ್ರಜ್ಯೋತಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ನೇತ್ರಜ್ಯೋತಿ ಕಾಲೇಜು, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನ ಅಂಗವಾಗಿ ನಡೆದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಯುವಜನತೆ ವ್ಯಸನಗಳ ದಾಸರಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ. ಕುಡಿತ ಮತ್ತಿತರ ದುಶ್ಚಟಗಳ ದಾಸರಾದವರನ್ನು ಸರಿದಾರಿಗೆ ತರಲು ಪ್ರೇರೇಪಿಸಿ ಸ್ವಾಭಿಮಾನ ಮತ್ತು ಸೌಹಾರ್ದತೆಯ ಸಮಾಜ ಕಟ್ಟಲು ಮಹಾಂತ ಶಿವಯೋಗಿ ಸ್ವಾಮೀಜಿ ಅನವರತ ಶ್ರಮಿಸಿದ್ದರು.
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು ಯುವಜನತೆ ಮಾದಕ ವಸ್ತುಗಳ ಆಮಿಷಗಳಿಗೆ ಬಲಿಯಾಗದೆ ಎಚ್ಚರ ವಹಿಸಬೇಕು ಎಂದರು.
ಜಿಲ್ಲಾ ಸರ್ಜನ್ ಡಾ.ಅಶೋಕ್ ಮಾತನಾಡಿ, ಶೈಣಿಕವಾಗಿ ಮುಂದಿರುವ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೀಡುಮಾಡುವ ವಿಚಾರ. ಅದರಿಂದ ಮುಕ್ತಿ ಪಡೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.
ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ವಿಶೇಷ ಉಪನ್ಯಾಸ ನೀಡಿ ಬೀಡಿ, ಸಿಗರೇಟ್, ಗಾಂಜಾ, ಸಾರಾಯಿ, ಡ್ರಗ್ಸ್ ಇವೆಲ್ಲವೂ ಯುವಜನತೆಯನ್ನು ದಾರಿ ತಪ್ಪಿಸುವ ಮಾದಕ ವಸ್ತುಗಳಾಗಿದ್ದು ಯುವಜನತೆ ಅಂಥ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ನೇತ್ರಜ್ಯೋತಿ ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೌರಿ ಪ್ರಭು, ಹದಿಹರೆಯದಲ್ಲಿ ವಿದ್ಯಾರ್ಥಿಗಳು ಸ್ನೇಹಿತರ ಒತ್ತಡಕ್ಕೆ ಮಣಿದು ಅಥವಾ ಕುತೂಹಲಕ್ಕಾಗಿ ದುಶ್ಚಟಗಳಿಗೆ ಬಲಿಯಾದಲ್ಲಿ ಆ ವ್ಯಸನದಿಂದ ಹೊರಬರುವುದು ಕಷ್ಟ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗದೆ ಆಟ ಪಾಠಗಳಿಗೆ ಗಮನ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಸ್ವಾಗತಿಸಿದರು. ಉಪನ್ಯಾಸಕಿ ಅಶ್ವಿನಿ ಮಾದಕ ವಸ್ತು ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ನೇತ್ರಜ್ಯೋತಿ ಸಂಸ್ಥೆ ವ್ಯವಸ್ಥಾಪಕ ಮಧ್ವವಲ್ಲಭ ಆಚಾರ್ಯ ಇದ್ದರು. ಕಾಲೇಜಿನ ಮುಖ್ಯ ಸಂಯೋಜಕ ಮಾಧವ ಪೂಜಾರಿ ನಿರೂಪಿಸಿ, ವಂದಿಸಿದರು.
