ಮಲ್ಪೆ ಬಂದರಿಗೆ ಶಾಸಕ ಯಶಪಾಲ್ ಭೇಟಿ

ಲೋಕಬಂಧು ನ್ಯೂಸ್ ಮಲ್ಪೆ, ಆ.1
ಜೂನ್ ಮತ್ತು ಜುಲೈ ತಿಂಗಳ ಮೀನುಗಾರಿಕೆ ನಿಷೇಧದ ಬಳಿಕ ಆಗಸ್ಟ್ 1ರಿಂದ ಮೀನುಗಾರಿಕಾ ಋತು ಆರಂಭಗೊಂಡ ಹಿನ್ನೆಲೆಯಲ್ಲಿ ಶಾಸಕ ಯಶಪಾಲ್ ಸುವರ್ಣ ಶನಿವಾರ ಮಲ್ಪೆ ಬಂದರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಲ್ಪೆ ಬಂದರಿನ ನೂತನ ಪ್ರವೇಶ ದ್ವಾರದ ಕಾಮಗಾರಿ ಬಗ್ಗೆ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಹಾಗೂ ಕಾಮಗಾರಿ ಹಿನ್ನೆಲೆಯಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಸಂಗ್ರಹಿಸಿರುವ ಮರಳನ್ನು ತಕ್ಷಣ ತೆರವುಗೊಳಿಸಿ ವಾಹನ ಪಾರ್ಕಿಂಗ್'ಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.


ಬಂದರಿನ ನಿರ್ಗಮನ ದ್ವಾರ ಅಗಲಗೊಳಿಸುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಅಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಈಗಾಗಲೇ ಗುರುತಿಸಿರುವ ಸೂಕ್ತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಮನವಿಯಂತೆ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಿದರು.


ಮಲ್ಪೆ ಬಂದರಿನ ಮಂಜಿ ಧಕ್ಕೆ ಹಾಗೂ ಬಂದರು ಪರಿಸರದಲ್ಲಿ ಸಮರ್ಪಕ ದಾರಿ ದೀಪದ ವ್ಯವಸ್ಥೆ, ಬಂದರಿನ ಸ್ವಚ್ಛತೆ, ಭದ್ರತೆ ದೃಷ್ಟಿಯಲ್ಲಿ ಸೆಕ್ಯೂರಿಟಿ ಸಿಬ್ಬಂದಿ, ಸಿಸಿ ಟಿವಿ ಅಳವಡಿಕೆ ಮೊದಲಾದ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಂಡು ಮೀನುಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸುವಂತೆ ಸೂಚಿಸಿದರು.


ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ಸುರೇಶ್ ಸಾಲ್ಯಾನ್, ರವಿ ಸಾಲ್ಯಾನ್, ರಮೇಶ್ ಕೋಟ್ಯಾನ್ ಮತ್ತು ಲಕ್ಷ್ಮೀಶ ಬಂಗೇರ, ಮಲ್ಪೆ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಮೀನುಗಾರಿಕೆ ಹಾಗೂ ಬಂದರು ಇಲಾಖೆ ಅಧಿಕಾರಿಗಳು ಇದ್ದರು.