ಲೋಕಬಂಧು ನ್ಯೂಸ್ | ಮಣಿಪಾಲ, ಆ.2
ಅಪ್ರಾಪ್ತರು ಹಾಗೂ 21 ವರ್ಷದೊಳಗಿನ ಯುವಕ- ಯುವತಿಯರಿಗೆ ಬಾರ್ ಮತ್ತು ಪಬ್'ಗಳಲ್ಲಿ ಮದ್ಯಪಾನ ಹಾಗೂ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 6 ಬಾರ್ ಮತ್ತು ಪಬ್'ಗಳ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿ, ಒಟ್ಟು ಆರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಸೂಚನೆಯಂತೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಉಡುಪಿ ಉಪ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳನ್ನೊಳಗೊಂಡ ಆರು ವಿಶೇಷ ತಂಡ ರಚಿಸಲಾಗಿತ್ತು.
ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್., ತನಿಖಾ ಪಿಎಸ್‌ಐ ಶಂಭುಲಿಂಗಯ್ಯ ಎಂ.ಇ., ಮಲ್ಪೆ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ಡಿ., ಹಿರಿಯಡ್ಕ ಠಾಣೆಯ ಪಿಎಸ್‌ಐ ಪುನೀತ್ ಕುಮಾರ್ ಬಿ.ಇ., ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಹಾಗೂ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಶೈಲ ಡಿ.ಎಂ. ನೇತೃತ್ವದಲ್ಲಿ ಸುಮಾರು 50ಕ್ಕೂ ಅಧಿಕ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ದಾಳಿಯ ವೇಳೆ ಮಣಿಪಾಲದ ಎಕ್ಸ್ಟಾಸ್ಸಿ 7 ಹ್ಯಾವೆನ್ ಪಬ್, ಡೌನ್ ದಿ ರೋಡ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಡೆಕ್ಸ್ಟರ್ ಬಾರ್ ಆ್ಯಂಡ್ ರಸ್ಟೋರೆಂಟ್ ಹಾಗೂ ಈಶ್ವರ ನಗರದ ಸಾಯಿಸಾಗರ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಡೀ ಟೀ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಜನನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಒಟ್ಟು ಆರು ಬಾರ್ ಹಾಗೂ ಪಬ್'ಗಳಿಗೆ ದಾಳಿ ನಡೆಸಿದರು.
ಆ ವೇಳೆ 21 ವರ್ಷದೊಳಗಿನ 64 ಯುವಕರು ಮತ್ತು 23 ಯುವತಿಯರು ಹಾಗೂ 17 ವರ್ಷದ ಓರ್ವ ಅಪ್ರಾಪ್ತ ಬಾಲಕ ಬಾರ್'ಗಳಲ್ಲಿ ಮದ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಮಹಜರು ನಡೆಸಿ, ಸಂಬಂಧಿಸಿದ ವರದಿಯನ್ನು ಮಣಿಪಾಲ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದ್ದು, ಬಾರ್ ಹಾಗೂ ಪಬ್'ಗಳ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಒಟ್ಟು ಆರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತರು ಹಾಗೂ 21 ವರ್ಷದೊಳಗಿನ ಯುವಕ-ಯುವತಿಯರಿಗೆ ಬಾರ್ ಮತ್ತು ರೆಸ್ಟೋರೆಂಟ್'ಗಳಲ್ಲಿ ಪ್ರವೇಶ ನೀಡಿ ಮದ್ಯಪಾನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಸಂಬಂಧಿತ ಬಾರ್ ಮತ್ತು ರೆಸ್ಟೋರೆಂಟ್'ಗಳ ಪರವಾನಿಗೆ ಅಮಾನತು ಮಾಡುವ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್ಪಾ ಕಾಯ್ದೆ ಹಾಗೂ ಕರ್ನಾಟಕ ಅಬಕಾರಿ ಲೈಸೆನ್ಸ್ ನಿಯಮಾವಳಿಗಳನ್ನು ಉಲ್ಲಂಘಿಸಿ 21 ವರ್ಷದೊಳಗಿನವರಿಗೆ ಪ್ರವೇಶ ನೀಡಿ ಮದ್ಯ ಮಾರಾಟ ಮಾಡುವ ಬಾರ್ ಹಾಗೂ ಪಬ್'ಗಳ ವಿರುದ್ಧ ವಿಶೇಷ ದಾಳಿ ಮುಂದುವರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ. ಎಚ್ಚರಿಕೆ ನೀಡಿದ್ದಾರೆ.
