ಲೋಕಬಂಧು ನ್ಯೂಸ್ ಬೆಂಗಳೂರು, ಆ.14
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2026ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿಗೆ ಎಂ.ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಿಗೆ 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ ಸಹಿತ ಸನ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೌರವ ಪ್ರಶಸ್ತಿ
ಅಕಾಡೆಮಿಯ ಗೌರವ ಪ್ರಶಸ್ತಿಗೆ ಜಪ್ಪು ದಯಾನಂದ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಪದ್ಮನಾಭ ಉಪಾಧ್ಯಾಯ, ಮಹಾಬಲ ದೇವಾಡಿಗ ಮತ್ತು ದೊಡ್ಡಮಲ್ಲಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು ಒಳಗೊಂಡಿದೆ.
ಯಕ್ಷಸಿರಿ ಪ್ರಶಸ್ತಿ
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ರಾಘವೇಂದ್ರ ಆಸ್ರಣ್ಣ, ಪೂರ್ಣಿಮಾ ಯತೀಶ್ ರೈ, ದುರ್ಗಾಪರಮೇಶ್ವರಿ ಕುಕ್ಕಿಲ, ಉಜಿರೆ ನಾರಾಯಣ ಪೂಜಾರಿ, ವಿದ್ವಾನ್ ಲಕ್ಷ್ಮೀನಾರಾಯಣ ಉಪಾಧ್ಯ ಉಡುಪಿ, ಹೆರಿಯ ನಾಯ್ಕ ಮೊಗೆಬೆಟ್ಟು, ರಾಮಗೌಡ ಗುಣವಂತೆ, ಪಡ್ರೆ ಕುಮಾರ, ಸುರೇಶ ಕುಪ್ಪೆಪದವು ಮತ್ತು ಶಿವಯ್ಯ ಆಯ್ಕೆಯಾಗಿದ್ದಾರೆ. ಯಕ್ಷಸಿರಿ ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಒಳಗೊಂಡಿದೆ.
ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಭೀಮಣ್ಣ ಹಾಗೂ ಡಾ.ತಲ್ಲೂರು ಶಿವರಾಮ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿಗೆ ಸಂಶೋಧಕ ಪ್ರೊ.ಎಂ.ಎನ್.ವೆಂಕಟೇಶ ಅವರನ್ನು ಆಯ್ಕೆ ಮಾಡಲಾಗಿದೆ. ದತ್ತಿನಿಧಿ ಪ್ರಶಸ್ತಿ ತಲಾ 25 ಸಾವಿರ ರೂ. ಒಳಗೊಂಡಿದೆ ಎಂದು ಡಾ.ತಲ್ಲೂರು ತಿಳಿಸಿದ್ದಾರೆ.