ಲೋಕಬಂಧು ನ್ಯೂಸ್ ಕಾಠ್ಮಂಡು, ಆ.28
ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 579ಕ್ಕೆ ಏರಿದೆ. ಮತ್ತೆ ಪ್ರವಾಹ ಸಂಭವಿಸಬಹುದು ಎನ್ನುವ ಎಚ್ಚರಿಕೆಯ ನಡುವೆಯೇ ಶೋಧ ಕಾರ್ಯಾಚರಣೆ ಮುಂದುವರಿದಿದೆ. 1,400ಕ್ಕೂ ಹೆಚ್ಚು ಜನ ಕಾಣೆಯಾಗಿದ್ದು, ಆ ಪೈಕಿ 320 ಭಾರತೀಯರಿದ್ದಾರೆ.ಕಾಣೆಯಾಗಿರುವ ಆಪ್ತರು ಮತ್ತು ಸಂಬಂಧಿಕರನ್ನು ಹುಡುಕಿಕೊಂಡು ಜನ ಅಲೆದಾಡುತ್ತಿದ್ದಾರೆ. ಎತ್ತರದ ಪ್ರದೇಶದಲ್ಲಿ ಕೊಚ್ಚಿಕೊಂಡು ಹೋಗಿರುವವರು ನೂರಾರು ಕಿ.ಮೀ. ದೂರ ಹರಿದು ಹೋಗಿರುವುದರಿಂದ ಕಾರ್ಯಾಚರಣೆಯೂ ದುಸ್ತರವಾಗಿದೆ.
ರಾಜಧಾನಿ ಕಾಠ್ಮಂಡುವಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಪ್ರಮುಖ ಮಾರ್ಗ ಪೃಥ್ವಿ ಹೆದ್ದಾರಿ ಸಂಪೂರ್ಣ ಬಂದ್ ಆಗಿ ಮೂರು ದಿನ ಕಳೆದಿದ್ದು, ಕೊರತೆ ಎದುರಾಗುವ ಸಾಧ್ಯತೆ ಇದೆ. ಇನ್ನೂ ನಾಲ್ಕೈದು ದಿನಗಳಿಗಾಗುವಷ್ಟು ಪೆಟ್ರೋಲ್, ಡೀಸೆಲ್ ಇದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ತರಕಾರಿ, ಹಣ್ಣು ಕೂಡ ಇದೇ ಮಾರ್ಗದಲ್ಲೇ ಕಾಠ್ಮಂಡುವಿಗೆ ಹೋಗಬೇಕಿದೆ.
ಈ ನಡುವೆ ಪ್ರವಾಹಕ್ಕೆ ಕಾರಣವಾದ ಪರ್ವತ ಪ್ರದೇಶದಲ್ಲಿ ಈಗ ಎರಡನೇ ಕೊಳ ನಿರ್ಮಾಣವಾಗಿರುವುದು ಕಂಡುಬಂದಿದೆ. ಯಾವುದೇ ಕ್ಷಣದಲ್ಲಿ ಅದು ಕಟ್ಟೆಯೊಡೆದು ಪ್ರವಾಹ ರೂಪ ತಾಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.
ನೇಪಾಳ-ಚೀನಾ ಪ್ರವಾಹ 93 ಸಾವಿರ ಜನರ ಮೇಲೆ ಪರಿಣಾಮ ಬೀರಿದೆ ಎಂದು ರೆಡ್‌ಕ್ರಾಸ್ ವರದಿ ಮಾಡಿದೆ.
ಶೋಧ ಕಾರ‍್ಯಾಚರಣೆ
ಒಟ್ಟು 4,400 ಪೊಲೀಸ್ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ನೇಪಾಳದ ಆರ್ಮಿ ಮತ್ತು ಸಶಸ್ತ್ರ ಪೊಲೀಸ್ ಪಡೆಗಳೂ ಅದರಲ್ಲಿ ಸೇರಿವೆ. ನುವಾಕೋಟ್, ರಸುವಾ ಮತ್ತು ಧಾಡಿಂಗ್ ಪ್ರದೇಶಗಳಲ್ಲಿ 1,473 ನೇಪಾಳಿಯರನ್ನು ರಕ್ಷಿಸಲಾಗಿದೆ.