ಲೋಕಬಂಧು ನ್ಯೂಸ್ ಉಡುಪಿ, ಆ.31
ಪ್ರವಾದಿ ಮುಹಮ್ಮದ್ ಅವರು ಜೀವನದ ಮಾರ್ಗದರ್ಶಿಯಾಗಿದ್ದು, ಮನುಷ್ಯ ಜೀವನದ ಪ್ರತಿಯೊಂದು ರಂಗವನ್ನೂ ಸಮರ್ಥವಾಗಿ ನಿಭಾಯಿಸಲು ಮಾರ್ಗದರ್ಶನ ಮಾಡಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದರು.ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಸಾಲಿಹಾತ್ ಆಡಿಟೋರಿಯಂನಲ್ಲಿ ನಡೆದ 'ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)' ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೀತಿ, ಸೌಹಾರ್ದತೆ ಹಾಗೂ ಮೌಲ್ಯಯುತ ಜೀವನ ಕಟ್ಟಿಕೊಳ್ಳಲು ಅವರು ತನ್ನ ಅನುಯಾಯಿಗಳಿಗೆ ಕಲಿಸಿದರು. ಮದೀನಾದಂಥ ನಗರವನ್ನು ತನ್ನ ಚಿಂತನೆಗಳಿಂದ ಬಲಿಷ್ಠ ನಾಡನ್ನಾಗಿಸಿದರು. ಅದರಿಂದಾಗಿ ಮದೀನಾ ಅಂದು ಮದ್ಯಮುಕ್ತ, ಅಪರಾಧಮುಕ್ತ ಹಾಗೂ ಬಡ್ಡಿಮುಕ್ತವಾಗಿ ಬದಲಾಯಿತು.
ಇಂದು ಅವರ ವಿಚಾರಗಳನ್ನು ನಾವು ಅರಿಯುವ ಅಗತ್ಯ ಹೆಚ್ಚಿದೆ. ಅವರು ಕಲಿಸಿದ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಗೆತನ ಮತ್ತು ದ್ವೇಷ ಸಮಾಜವನ್ನು ದುರ್ಬಲಗೊಳಿಸುತ್ತಿರುವ ಈ ದಿನಗಳಲ್ಲಿ ಪ್ರವಾದಿ ಮುಹಮ್ಮದ್ ವಿಚಾರಗಳನ್ನು ಹೆಚ್ಚು ಅರಿಯಬೇಕಾದ ಅನಿವಾರ್ಯತೆಯಿದೆ ಎಂದರು.
'ಪೋಸ್ಟ್ ಟ್ರೂತ್' ಕಲ್ಪನೆ ಮೂಲಕ ಸುಳ್ಳನ್ನು ಸತ್ಯವಾಗಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಅಪಪ್ರಚಾರ, ಸುಳ್ಳನ್ನು ವ್ಯಾಪಕಗೊಳಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ವಾಸ್ತವಿಕ ವಿಚಾರಗಳನ್ನು ಜನರಿಗೆ ತಿಳಿಯಪಡಿಸಲು ಧೈರ್ಯದಿಂದ ಸತ್ಯವನ್ನು ನುಡಿಯುವವರು ನಾವಾಗಬೇಕಾಗಿದೆ ಎಂದರು.
ಮೌಲ್ಯಗಳು ದುರ್ಬಲಗೊಂಡು ತಂದೆಯ ಅಂತ್ಯಸಂಸ್ಕಾರಕ್ಕೂ ಬಾರದೆ ಆನ್‌ಲೈನ್‌ನಲ್ಲಿ ವೀಕ್ಷಿಸುವ ಅಮಾನವೀಯ ವರ್ತನೆಗಳು ನಡೆಯುವ ಸಮಾಜದಲ್ಲಿ ನಾವು ಬದುಕುತ್ತಿರುವುದು ನಿಜಕ್ಕೂ ಆಘಾತಕಾರಿ. ಇಂಥ ಸಂದರ್ಭದಲ್ಲಿ ಸಮಾಜದಲ್ಲಿ ಮೌಲ್ಯಗಳ ಮರುಸ್ಥಾಪನೆಗೆ ಪ್ರವಾದಿ ಬೋಧನೆಯನ್ನು ಅರಿಯುವುದು ಅತೀ ಅಗತ್ಯ ಎಂದು ಮುಹಮ್ಮದ್ ಕುಂಞಿ ಪ್ರತಿಪಾದಿಸಿದರು.
ರಾಜಕೀಯ ಮುಂದಾಳು ಶಂಕರ್ ಕುಂದರ್ ಮಾತನಾಡಿ, ಪ್ರವಾದಿ ಮುಹಮ್ಮದ್ ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದರು. ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರೀತಿ, ಸೌಹಾರ್ದಯುತ ಜೀವನ ನಡೆಸುವ ಅಗತ್ಯವಿದೆ ಎಂದರು.
ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೆರಾಲ್ಡ್ ಪಿಂಟೋ ಮತ್ತು ಸಾಲಿಹಾತ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುನಂದಾ ಮಾತನಾಡಿದರು.
ಅಫಾಫ್ ಕುರ್‌ಆನ್ ಪಠಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತ ಇದ್ರಿಸ್ ಹೂಡೆ ಸ್ವಾಗತಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಹಸನ್ ಕೋಡಿಬೆಂಗ್ರೆ, ಎಸ್ಐಓ ಹೂಡೆ ಘಟಕಾಧ್ಯಕ್ಷ ಸಾಕೀಬ್ ಸುಲೈಮಾನ್, ಕಾರ್ಯಕ್ರಮ ಸಂಚಾಲಕ ಅಫ್ಘಾನ್ ಬಿ. ಹೂಡೆ, ರಿಫಾ ಛೇಂಬರ್ ಆಫ್ ಕಾಮರ್ಸ್‌ನ ಶಕೀಲ್ ನೇಜಾರು, ಸಾಲಿಹಾತ್ ಶಿಕ್ಷಣ ಸಂಸ್ಥೆ ಖಜಾಂಚಿ ಅಬ್ದುಲ್ ಕಾದೀರ್ ಮೊಯ್ದಿನ್, ಸಾಲಿಹಾತ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಅಬ್ದುಲ್ ರಝಾಕ್ ನಕ್ವಾ, ಸಾಲಿಡಾರಿಟಿಯ ನಿಹಾಲ್ ಕಿದಿಯೂರು ಮೊದಲಾದವರಿದ್ದರು.