ಲೋಕಬಂಧು ನ್ಯೂಸ್ ಕಾರ್ಕಳ, ಆ.14
ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಾಲ್ಡಾನ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಸ್ಮಾ ಸಾಲ್ಡಾನ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆದುಕೊಂಡಿದ್ದಾರೆ.
ಅವರು ಕೌಡೂರು ರಂಗನಪಲ್ಕೆ ನಿವಾಸಿ ಅಶೋಕ್ ಜಾಕೋಬ್ ಸಲ್ಮಾನಾ ಮತ್ತು ಮರಿಯಾ ಗ್ರೆಟ್ಟಾ ಸಾಲ್ಡಾನ ದಂಪತಿ ಪುತ್ರಿ.
ಪ್ರಾಥಮಿಕ ಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ಶೈನಿ ಅವರು ಕಾರ್ಕಳದ ಪ್ರತಿಷ್ಠಿತ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದರು.
ಬಾಲ್ಯದಿಂದಲೂ ವಿಮಾನಯಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶೈನಿ ತನ್ನ ಗುರಿ ತಲುಪಲು ಕಠಿಣ ಹಾದಿ ಆಯ್ಕೆ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ.
ಪೈಲಟ್ ಕನಸು ನನಸಾಗಿಸಲು ಶೈನಿ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ನಂತರ 2023ರ ಆಗಸ್ಟ್'ನಿಂದ ಉತ್ತರ ಪ್ರದೇಶದ ಫುರ್ಸತ್ ಗಂಜ್'ನಲ್ಲಿರುವ ಪ್ರತಿಷ್ಠಿತ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯಲ್ಲಿ ವೃತ್ತಿಪರ ಪೈಲಟ್ ತರಬೇತಿ ಪಡೆದಿದ್ದರು.