ಲೋಕಬಂಧು ನ್ಯೂಸ್ | ಉಡುಪಿ, ಸೆ.12
ಹೈಕೋರ್ಟ್ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣಪತಿ ವಿಗ್ರಹ ತಯಾರಿ, ಮಾರಾಟ, ವಿಸರ್ಜನೆ ನಿಷೇಧಿಸಲಾಗಿದೆ. ಅಂತೆಯೇ ಲೋಹ ಮಿಶ್ರಿತ, ರಾಸಾಯನಿಕ ಬಣ್ಣ ಬಳಸಿದ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಿದರೆ ಜಲಜೀವಿಗಳಿಗೆ ಅಪಾಯದ ಜೊತೆಗೆ ಮಾನವನಿಗೆ ಕ್ಯಾನ್ಸರ್‌ನಂಥ ಮಾರಕ ರೋಗಗಳು ಬರುವ ಸಾಧ್ಯತೆ ಇದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್ ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಸನ್ಮತಿ ಪತ್ರಿಕೆಯ ಆಗಸ್ಟ್ ತಿಂಗಳ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಪಿಓಪಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ಪರವಾನಿಗೆ ನೀಡುತ್ತಿಲ್ಲ. ಆ ಸಂಬಂಧದ ನಿಷೇಧ ಆದೇಶವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನಗರ/ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಸಹಿತ ವಿವಿಧ ಇಲಾಖೆಗಳದ್ದಾಗಿದೆ.
ಆವೆಮಣ್ಣಿನಲ್ಲಿ ಗಣಪತಿ ವಿಗ್ರಹ ತಯಾರಿಗೆ ಉತ್ತೇಜನ ನೀಡಬೇಕು. ಗಣಪತಿ ವಿಗ್ರಹಕ್ಕೆ ಬಳಸಿದ ಹೂ, ಅಲಂಕಾರ ಸಾಮಗ್ರಿ ತೆಗೆದು ವಿಸರ್ಜಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10ರಿಂದ ಬೆಳಿಗ್ಗೆ 6ರ ತನಕ ಮೈಕ್ ಬಳಸುವಂತಿಲ್ಲ. ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದು ಜಫ್ತಿ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜಲಮೂಲಗಳ ಮೇಲೆ ಮಂಡಳಿ ನಿಗಾ ಇಡಲಿದೆ. ಹರಿಯುವ ನೀರಿನ ಬದಲು ಬಕೆಟ್, ತೊಟ್ಟಿ, ಟ್ಯಾಂಕ್'ಗಳಲ್ಲಿ ವಿಗ್ರಹ ವಿಸರ್ಜಿಸುವುದು ಸೂಕ್ತ. ಕೆಲವು ನಗರ/ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಗಣಪತಿ ವಿಗ್ರಹ ವಿಸರ್ಜನೆಗೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡುತ್ತಿವೆ. ಅರಶಿನ, ಕಾಗದ, ಎಲೆ, ವಿವಿಧ ಹಿಟ್ಟುಗಳಲ್ಲಿ ಗಣಪತಿ ವಿಗ್ರಹ ತಯಾರಿಸಿ ವಿಸರ್ಜಿಸುವ ಕ್ರಮ ಪರಿಸರ ಸ್ನೇಹಿಯಾಗಲಿದೆ ಎಂದವರು ಹೇಳಿದರು.
409 ಗಣಪತಿ ವಿಗ್ರಹ ಪ್ರತಿಷ್ಠಾಪನೆ
ಉಡುಪಿ ಜಿಲ್ಲೆಯಲ್ಲಿ ಈ ಬಾರಿ 409 ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಪರವಾನಿಗೆ ನೀಡಲಾಗಿದೆ. ಗಣೇಶೋತ್ಸವ ಪ್ರಯುಕ್ತ ಭದ್ರತೆಗಾಗಿ ಕುಂದಾಪುರ, ಕಾರ್ಕಳ ಹಾಗೂ ಉಡುಪಿ ಉಪವಿಭಾಗದಲ್ಲಿ ಸುಮಾರು 804 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು 163 ಹೋಮ್ ಗಾರ್ಡ್'ಗಳನ್ನು ನಿಯೋಜಿಸಲಾಗಿದೆ ಎಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುದರ್ಶನ್ ದೊಡ್ಮನಿ ತಿಳಿಸಿದರು.
ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠೆ, ವಿಸರ್ಜನಾ ಮೆರವಣಿಗೆಗೆ ಸ್ಥಳೀಯಾಡಳಿತ, ಸೌಂಡ್ಸ್'ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ಡಿಜೆ ಬಳಸಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ. ರಾತ್ರಿ ವೇಳೆ ಕಾರ್ಯಕ್ರಮ, ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಬಾಕ್ಸ್ ಬಳಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ತೊಂದರೆಯಾದರೆ 112 ಸಂಖ್ಯೆಗೆ ಕರೆ ಮಾಡಬಹುದು ಎಂದರು.
ಉಪ ಪರಿಸರ ಅಧಿಕಾರಿ ಡಾ.ಅಮೃತಾ, ಉಡುಪಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)