ಲೋಕಬಂಧು ನ್ಯೂಸ್ ಉಡುಪಿ
ಗ್ಯಾರಂಟಿ ಯೋಜನೆಗಳ ಮರುಸರ್ವೇ ಕಾರ್ಯ ಕೈಗೊಳ್ಳುವಾಗ ಗ್ಯಾರಂಟಿ ಯೋಜನೆಯ ಯಾವುದೇ ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೂಚನೆ ನೀಡಿದರು.ಮಣಿಪಾಲ ರಜತಾದ್ರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೆ.25ರಂದು ಶುಕ್ರವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳ ನೈಜ ಫಲಾನುಭವಿಗಳನ್ನು ಗುರುತಿಸುವ ಪರಿಶೀಲನೆ ಕಾರ್ಯ ಕೈಗೊಳ್ಳುವಾಗ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸೂಕ್ತವಾಗಿ ಪರಿಶೀಲಿಸಬೇಕು ಎಂದರು.
ಗೃಹಲಕ್ಷ್ಮಿ ಫಲಾನುಭವಿಗಳನ್ನು ಗುರುತಿಸುವ ಪರಿಶೀಲನಾ ಕಾರ್ಯಕ್ಕಾಗಿ ಈಗಾಗಲೇ 1,050 ಗಣತಿದಾರರನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿಯನ್ನು ತಪ್ಪದೇ ಮಾಡಿಸಬೇಕು. ಜಿಲ್ಲೆಯಲ್ಲಿ ಅದರ ಪ್ರಗತಿ ಕುಂಠಿತವಾಗಿದೆ. ಕೆಲವು ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ಪ್ರಗತಿ ಸಾಧಿಸಲಾಗುತ್ತಿಲ್ಲ ಎಂದು ಕೇಳಿಬರುತ್ತಿದೆ. ಅದಕ್ಕೆ ಇಲಾಖಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3.64 ಲಕ್ಷ ಜನರು ನೋಂದಣಿಯಾಗಿದ್ದು, ಈಗಾಗಲೇ 3.17 ಲಕ್ಷ ಫಲಾನುಭವಿಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಪ್ರತಿಯೊಂದು ಮನೆಗೂ ಈಗಾಗಲೇ ಗುರುತಿನ ಚೀಟಿಯನ್ನು ಇಲಾಖೆಯ ವತಿಯಿಂದ ಅಂಟಿಸಲಾಗಿದೆ. ಬಾಕಿ ಉಳಿದ 47 ಸಾವಿರ ಮನೆಗಳ ಸರ್ವೇ ಕಾರ್ಯಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಸತೀಶ್, ಗೀತಾ ವಾಗ್ಲೆ, ತಾಲೂಕುಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರಾದ ರಮೇಶ್ ಕಾಂಚನ್, ಸುನೀತಾ ಶೆಟ್ಟಿ, ನವೀನ್ ಚಂದ್ರ, ಮೋಹನ್ ಪೂಜಾರಿ, ಶಂಕರ ಸೇರಿಗಾರ್ ಇದ್ದರು.