ಲೋಕಬಂಧು ನ್ಯೂಸ್ ಮಣಿಪಾಲ
ಮೈಸೂರಿನಲ್ಲಿ ನಡೆಯುವ ದಸರಾ ಕವಿಗೋಷ್ಟಿಯ ಉದ್ಘಾಟನೆಗೆ ಹಿರಿಯ ಸಾಹಿತಿ ವೈದೇಹಿ ಅವರನ್ನು ಆಹ್ವಾನಿಸಲು ಇಲ್ಲಿನ ಅನಂತ ನಗರದ ಅವರ ನಿವಾಸ `ಇರುವಂತಿಗೆ'ಗೆ ದಸರಾ ಕವಿಗೋಷ್ಟಿ ಸಮಿತಿ ಸದಸ್ಯರು ಆಗಮಿಸಿದರು.ಆಹ್ವಾನ ಸ್ವೀಕರಿಸಿದ ವೈದೇಹಿ ಅವರು, ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಾರೈಸಿದರು.
ಐದು ಕವಿಗೋಷ್ಟಿಗಳಿಗೆ ಜನರು ಹೆಚ್ಚು ನೆರೆಯುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ಶ್ರವಣ ಮುಖ್ಯ. ಅದರಿಂದ ವಿವಿಧ ಕವಿಗಳ ಕವನಗಳನ್ನು ಆಲಿಸಲು ಸಹೃದಯರು ಹೆಚ್ಚುವುದು ಸಹಜ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದರು.
ದಸರಾ ಮಹೋತ್ಸವ ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಚೆನ್ನಾಗಿ ನಡೆಯಲಿ. ಯಾವ ಲೋಪದೋಷಗಳು ಆಗದಿರಲಿ. ಉತ್ತಮ ಮಳೆಯಾಗಿ, ಚೆನ್ನಾಗಿ ಬೆಳೆ ಬಂದು ನಮ್ಮ ರೈತರ ಜೊತೆಗೆ ನಾಡಿನ ಜನತೆ ಖುಷಿಯಿಂದ ಇರುವಂತಾಗಲಿ ಎಂದು ಆಶಿಸಿದರು.
2007ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದೆ. ಅದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಟಿಯಲ್ಲಿ ಕವಿತೆ ವಾಚಿಸಿದ್ದೆ ಎಂದು ಸ್ಮರಿಸಿದರು.
ಕವಿಗೋಷ್ಟಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್ ಎಂ.ಬಿ., ಕವಿಗೋಷ್ಟಿ ಉಪಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರ ಕಲಾವಿದೆ ಪಲ್ಲವಿ ಅನಿಲ್ ಹಾಗೂ ಟಿ.ಅನಿಲ್ ಕುಮಾರ್ ಇದ್ದರು.