ಕರ್ಣಾಟಕ ಬ್ಯಾಂಕ್‌ನ 102ನೇ ವಾರ್ಷಿಕ ಮಹಾಸಭೆ: ಏಳು ನಿರ್ಣಯಗಳಿಗೆ ಅನುಮೋದನೆ

ಲೋಕಬಂಧು ನ್ಯೂಸ್ | ಮಂಗಳೂರು
ಕರ್ಣಾಟಕ ಬ್ಯಾಂಕ್‌ನ 102ನೇ ವಾರ್ಷಿಕ ಮಹಾಸಭೆ ಸೆ.22ರಂದು ಮಂಗಳೂರಿನಿಂದ ವರ್ಚುವಲ್ ಮೂಲಕ ನಡೆಯಿತು.
ಬ್ಯಾಂಕ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಪಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್, ಆಡಳಿತ ಮಂಡಳಿ ಸದಸ್ಯರು, ಕಾನೂನು ಸಲಹೆಗಾರರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಸಭೆಯಲ್ಲಿ ಮಂಡಿಸಲಾದ ಎಲ್ಲಾ ಏಳು ನಿರ್ಣಯಗಳಿಗೆ ಷೇರುದಾರರು ಅಗತ್ಯ ಬಹುಮತದೊಂದಿಗೆ ಅನುಮೋದನೆ ನೀಡಿದರು. ನಿವೃತ್ತಿ ಮೂಲಕ ಮರುನೇಮಕಕ್ಕೆ ಅರ್ಹರಾಗಿದ್ದ ಬಿ.ಆರ್. ಅಶೋಕ್ ಅವರನ್ನು ಕಾರ್ಯನಿರ್ವಾಹಕೇತರ ಸ್ವತಂತ್ರರಲ್ಲದ ನಿರ್ದೇಶಕರಾಗಿ ಮರುನೇಮಕ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ದೊರೆಯಿತು. ಅಲ್ಲದೆ, ಬಿಜಿ ಎಸ್.ಎಸ್. ಅವರನ್ನು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ಡಾ.ಎಂ. ಅರುಣಶ್ಯಾಮ್ ಮತ್ತು ಪಾರ್ಥಸಾರಥಿ ಪೆರಿಯಸ್ವಾಮಿ ಅವರನ್ನು ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡುವ ಪ್ರಸ್ತಾವಗಳಿಗೂ ಷೇರುದಾರರು ಒಪ್ಪಿಗೆ ನೀಡಿದರು.


ಬ್ಯಾಟ್ಲಿಬಾಯ್ ಮತ್ತು ಪುರೋಹಿತ್ ಸಂಸ್ಥೆಯನ್ನು ಬ್ಯಾಂಕ್‌ನ ಜಂಟಿ ಶಾಸನಬದ್ಧ ಲೆಕ್ಕಪರಿಶೋಧಕರಾಗಿ ನೇಮಕ ಮಾಡುವ ನಿರ್ಣಯಕ್ಕೂ ಅನುಮೋದನೆ ದೊರೆಯಿತು.


2026ರ ಮಾ.31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷಕ್ಕೆ ಪ್ರತೀ ಈಕ್ವಿಟಿ ಷೇರಿಗೆ 5 ಅಂತಿಮ ಲಾಭಾಂಶ ನೀಡುವ ಪ್ರಸ್ತಾವವನ್ನೂ ಷೇರುದಾರರು ಅಂಗೀಕರಿಸಿದರು. 2025-26ನೇ ಹಣಕಾಸು ವರ್ಷದ ಬ್ಯಾಂಕ್‌ನ ಪರಿಶೋಧಿತ ಪ್ರತ್ಯೇಕ ಮತ್ತು ಏಕೀಕೃತ ಹಣಕಾಸು ಹೇಳಿಕೆಗಳು ಹಾಗೂ ನಿರ್ದೇಶಕರು ಮತ್ತು ಲೆಕ್ಕಪರಿಶೋಧಕರ ವರದಿಗಳಿಗೂ ಅನುಮೋದನೆ ದೊರೆಯಿತು.


ಸಭೆಯ ಅಂತ್ಯದಲ್ಲಿ ಷೇರುದಾರರು ಮುಂದುವರಿಸಿಕೊಂಡು ಬಂದಿರುವ ವಿಶ್ವಾಸ ಮತ್ತು ಬೆಂಬಲಕ್ಕೆ ಬ್ಯಾಂಕ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು.