ರಷ್ಯಾದ ಜಾಗತಿಕ ಪರಿಸರ ವೇದಿಕೆಯಲ್ಲಿ ವಿವೇಕ್ ಆಳ್ವ ಉಪನ್ಯಾಸ



ಲೋಕಬಂಧು ನ್ಯೂಸ್ ಮೂಡುಬಿದಿರೆ, ಸೆ.12
ರಷ್ಯನ್ ವಿಜ್ಞಾನ ಅಕಾಡೆಮಿಯ ಕರೇಲಿಯನ್ ಸಂಶೋಧನಾ ಕೇಂದ್ರ, ರಷ್ಯನ್ ರಾಷ್ಟ್ರೀಯ ಬ್ರಿಕ್ಸ್ ಸಂಶೋಧನಾ ಸಮಿತಿ ಸಹಯೋಗದಲ್ಲಿ  ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡ್ಸ್ಕ್'ನಲ್ಲಿ ಸೆಪ್ಟೆಂಬರ್ 15ರಿಂದ 17ರ ವರೆಗೆ ‘ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಸಹಕಾರದ ಮೂಲಕ ಪರಿಸರ ಮತ್ತು ಪ್ರಕೃತಿ ನಿರ್ವಹಣೆ’ ಎಂಬ ವಸ್ತು ವಿಷಯದೊಂದಿಗೆ ನಡೆಯುವ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸೇರಿದಂತೆ ಭಾರತದ ಐವರು ವಿಷಯ ತಜ್ಞರು  ಭಾಗವಹಿಸಲಿದ್ದಾರೆ.ಈ ಅಧಿವೇಶನದಲ್ಲಿ  ವಿವೇಕ್ ಆಳ್ವ ಅವರು 'ಪಶ್ಚಿಮ ಘಟ್ಟಗಳ ಸಂರಕ್ಷಣೆ: ಜಾಗೃತಿಯಿಂದ ಸಮುದಾಯದ ಕಾರ್ಯದತ್ತ' ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.


ಪರಿಸರ ಸಂರಕ್ಷಣೆಯಲ್ಲಿ ಸಮುದಾಯಗಳು ಹಾಗೂ ಯುವಜನರ ಪಾತ್ರವನ್ನು ಅವರು ವಿವರಿಸಲಿದ್ದು, ವಿಶೇಷವಾಗಿ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಕುರಿತು ವಿಚಾರ ಮಂಡಿಸಲಿದ್ದಾರೆ.


ಅವರ ಅಧಿವೇಶನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೈಗೊಂಡಿರುವ ವಿವಿಧ ಪರಿಸರ ಸಂರಕ್ಷಣಾ ಉಪಕ್ರಮಗಳನ್ನೂ ಪ್ರಸ್ತುತಪಡಿಸಲಾಗುವುದು. ಅದರಲ್ಲಿ ಶೋಭಾವನ ಮತ್ತು ಹರೀಶ್ ಭಟ್ ಪಕ್ಷಿವನದಂಥ ನೈಸರ್ಗಿಕ ಆವಾಸಸ್ಥಳಗಳ ನಿರ್ಮಾಣವೂ ಸೇರಿದೆ.


ಹರೀಶ್ ಭಟ್ ಪಕ್ಷಿವನಕ್ಕೆ 2021ರಲ್ಲಿ  ‘ಯುನೈಟೆಡ್ ನೇಷನ್ಸ್ ಆ್ಯಕ್ಟ್ ಟೂ ರಿಸ್ಟೋರ್ ಫಾರ್ ಕ್ಲೈಮೇಟ್ ಆ್ಯಕ್ಷನ್’  ಉಪಕ್ರಮದಡಿ ಮನ್ನಣೆ ದೊರೆತಿರುವುದನ್ನೂ ಉಲ್ಲೇಖಿಸಲಾಗುವುದು.


ಅಲ್ಲದೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಹಲವು ಪರಿಸರ ಸ್ವಚ್ಛತಾ ಅಭಿಯಾನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.