ಸಜ್ಜನರ ಸಂಗದಿಂದ ಧರ್ಮ- ಭಕ್ತಿ ಜಾಗೃತಿ

ಲೋಕಬಂಧು ನ್ಯೂಸ್, ಉಡುಪಿ
ಸಜ್ಜನರ ಸಹವಾಸ, ಕ್ಷೇತ್ರ ಸಂದರ್ಶನದಿಂದ ಭಗವಂತನಲ್ಲಿ ಭಕ್ತಿ ಉದ್ದೀಪನಗೊಂಡು ಧರ್ಮ ಜಾಗೃತಿ ಸಾಧ್ಯವಾಗುತ್ತದೆ ಎಂದು ಹಂಗಾರಕಟ್ಟೆ ಬಾಳೆಕುದ್ರು ಮಠಾಧೀಶ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದಲ್ಲಿ ಶನಿವಾರ ನಡೆದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


'ನನ್ನನ್ನು ಶ್ರದ್ಧಾ-ಭಕ್ತಿಯಿಂದ ಆಶ್ರಯಿಸಿದ ಭಕ್ತರ ರಕ್ಷಣೆಯ ಹೊಣೆಗಾರಿಕೆ ನನ್ನದು' ಎಂದು ಸ್ವತಃ ಶ್ರೀಕೃಷ್ಣನೇ ಗೀತೆಯಲ್ಲಿ ಹೇಳಿದ್ದಾನೆ. ಆದರೆ, ದೈವ ಭಕ್ತಿಗೆ ಚಂಚಲ ಮನಸ್ಸು ಅಡ್ಡಿಯಾಗುತ್ತದೆ. ಮನೋನಿಗ್ರಹ ಗೀತಾ ಶ್ರವಣ- ಮನನ, ಮಠ- ಮಂದಿರಗಳ ದರ್ಶನದಿಂದ ಸಾಧ್ಯ ಎಂದರು.


ಭಗವಂತನ ನುಡಿಗಳು ವಿಶ್ವವ್ಯಾಪಿಯಾಗಬೇಕು ಮತ್ತು ಎಲ್ಲರೂ ಅನುಸರಿಸಬೇಕು ಎಂಬ ಆಶಯದಿಂದ ಪುತ್ತಿಗೆ ಶ್ರೀಗಳು ನಡೆಸುತ್ತಿರುವ ಗೀತಾ ಪ್ರಚಾರ ಮತ್ತು ವಿದೇಶಗಳಲ್ಲೂ ಕೃಷ್ಣಪ್ರಜ್ಞೆ ಮೂಡಿಸುವ ಕಾರ್ಯ ಹಿಂದೂ ಸಮಾಜಕ್ಕೇ ಹೆಮ್ಮೆಯ ಸಂಗತಿ ಎಂದರು.


ಅವಿನಾಭಾವ ಸಂಬಂಧ
ಶಿವಳ್ಳಿ ಬ್ರಾಹ್ಮಣ ಸಮುದಾಯದವರ ಮಠವಾದ ಬಾಳೆಕುದ್ರು ಶ್ರೀಮಠ, ಆಚಾರ್ಯ ಶಂಕರರಿಗಿಂತ ಪೂರ್ವದಲ್ಲಿದ್ದ ಭಾಗವತ ಸಂಪ್ರದಾಯಕ್ಕೆ ಸೇರಿದ್ದು. ಬಾಳೆಕುದ್ರು ಶ್ರೀಮಠಕ್ಕೂ ಉಡುಪಿ ಕೃಷ್ಣಮಠಕ್ಕೂ ಅವಿನಾಭಾವ ಸಂಬಂಧ ಇದೆ. ಬಾಳೆಕುದ್ರು ಮಠ ಪರಂಪರೆಯ ಒಂಭತ್ತು ಮುನಿಗಳ ಪೈಕಿ ಕೈವಲ್ಯಮುನಿ ಮುಂದೆ ಮಾಧ್ವ ಮಠದ ಕೈವಲ್ಯತೀರ್ಥರಾದರು ಎಂಬ ಇತಿಹಾಸ ಇದೆ. ಶಿವಳ್ಳಿ ಬ್ರಾಹ್ಮಣರ ಕುಲದೇವರು ಅನಂತೇಶ್ವರ. ಚಂದ್ರಮೌಳೀಶ್ವರ ಉತ್ಸವದಂದೇ ತಾವು ಉಡುಪಿಗೆ ಆಗಮಿಸಿ, ಉತ್ಸವದಲ್ಲಿ ಭಾಗಿಯಾಗಿರುವುದು ಸಂತೋಷದಾಯಕ ಎಂದು ಬಾಳೆಕುದ್ರು ಶ್ರೀಗಳು ಹೇಳಿದರು.


ಸಂತರ ಮಾರ್ಗದರ್ಶನ ಪೂರಕ
ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಅಧ್ಯಯನ, ಸಾಧನೆಯ ಮೂಲಕ ಶ್ರೇಷ್ಠ ಅನುಭವ ಪಡೆದ ಸಂತರ ಮಾರ್ಗದರ್ಶನ ಸಾಧಕರಿಗೆ ಪೂರಕ. ಆ ಕಾರಣದಿಂದಲೇ ಗೀತೋತ್ಸವದಲ್ಲಿ ವಿವಿಧ ಸಂತರಿಂದ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಜ್ಞಾನ ಸಂಪಾದನೆಗೆ ಗೀತೆ ಸೋಪಾನ
ನಮ್ಮ ಎಲ್ಲಾ ಸಂದೇಹ, ಸಮಸ್ಯೆಗಳಿಗೆ ಉತ್ತರ ನೀಡುವ ಭಗವದ್ಗೀತೆಯನ್ನು ವಿವಿಧ ದೃಷ್ಟಿಕೋನಗಳಿಂದ ನೋಡಬಹುದು. ಆಚಾರ್ಯತ್ರಯರಾದ ಶಂಕರ ರಾಮಾನುಜ ಮಧ್ವರು ಗೀತೆಯ ಬಗ್ಗೆ ಭಾಷ್ಯ ಬರೆದಿದ್ದಾರೆ. ಅನೇಕ ಆಚಾರ್ಯರು, ಸಂತರು ವ್ಯಾಖ್ಯಾನಿಸಿದ್ದಾರೆ. ಇಂದಿಗೂ ಗೀತೆಯ ಬಗೆಗೆ ಹೊಸ ಹೊಸ ಅಭಿಮತಗಳು ವ್ಯಕ್ತವಾಗುತ್ತಲೇ ಇದೆ. ಗೀತೆಯ ಬಗೆಗಿನ ಎಲ್ಲ ಅಭಿಪ್ರಾಯಗಳೂ ಹೊಸತನದಿಂದ ಕೂಡಿದೆ. ಜ್ಞಾನ ಸಂಪಾದನೆಗೆ ಗೀತೆ ಸೋಪಾನ ಎಂದರು.


ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.


ಈ ಸಂದರ್ಭದಲ್ಲಿ ಬಾಳೆಕುದ್ರು ಶ್ರೀಗಳನ್ನು ಪುತ್ತಿಗೆ ಮಠ ಪರವಾಗಿ ಗೌರವಿಸಲಾಯಿತು.


ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು. 'ಸುಗುಣಮಾಲಾ' ಸಂಪಾದಕ ಮಹಿತೋಷ ಆಚಾರ್ಯ ನಿರೂಪಿಸಿದರು