ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ರಜತ ಸಂಭ್ರಮ: ಅ. 24ರಂದು ನೂತನ ಪ್ರಧಾನ ಕಚೇರಿ ಶುಭಾರಂಭ

ಲೋಕಬಂಧು ನ್ಯೂಸ್ ಉಡುಪಿ
ಸಹಕಾರಿ ರಂಗದ ಪ್ರತಿಷ್ಠಿತ ಪರಿವಾರ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಹಾಗೂ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 24ರಂದು ಅಪರಾಹ್ನ 4.30ಕ್ಕೆ ಉಡುಪಿಯ ಜೋಡುಕಟ್ಟೆಯ ಆಶ್ರಯ ಟವರ್ಸ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಹಿರಿಯ ಸಹಕಾರಿ ಶಂಭು ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದರು.


2000ರಲ್ಲಿ ಶಿವಪಾಡಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ಹೆಸರಿನಲ್ಲಿ ಆರಂಭಗೊಂಡ ಸಂಘ ಬಳಿಕ ಪರಿವಾರ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ಎಂಬ ಹೆಸರಿನಲ್ಲಿ ಮುನ್ನಡೆದು 25 ವರ್ಷಗಳ ಪಯಣ ಪೂರ್ಣಗೊಳಿಸಿದೆ. ಇದೀಗ ಸ್ವಂತ ಹವಾನಿಯಂತ್ರಿತ ಕಟ್ಟಡದಲ್ಲಿ ಪ್ರಧಾನ ಕಚೇರಿ ಆರಂಭಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದರು.


ಆರಂಭಿಕ ಎರಡು ವರ್ಷಗಳಲ್ಲಿ ಸಂಘ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ಹಿರಿಯ ಸಹಕಾರಿ ಶಂಭು ಶೆಟ್ಟಿ ಅವರ ನಿರ್ದೇಶನದಂತೆ ಹೊಸ ಆಡಳಿತ ಮಂಡಳಿ ರಚಿಸಲಾಯಿತು. ಬಳಿಕ ತಾನು ಸಂಘದ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಿದ ನಂತರ ಪರಿವಾರ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಿತು ಎಂದು ಭಟ್ ವಿವರಿಸಿದರು.


ಸಂಘ ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಪ್ರತಿ ವರ್ಷ ಶೇ.12ರಷ್ಟು ಲಾಭಾಂಶ ನೀಡುತ್ತಿದೆ. ಸದಸ್ಯರ ಆರ್ಥಿಕ ಹಿತಾಸಕ್ತಿ ಮತ್ತು ವಿಶ್ವಾಸಕ್ಕೆ ಆದ್ಯತೆ ನೀಡಿರುವ ಸಂಘ ಪ್ರಸ್ತುತ ಸುಮಾರು 2,000 ಸದಸ್ಯರನ್ನು ಹೊಂದಿದೆ. ಸುಮಾರು 50 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ವಾರ್ಷಿಕ 125 ಕೋಟಿ ವಹಿವಾಟು ನಡೆಸುತ್ತಿದೆ ಎಂದರು.


ಸಂಘದ ಪ್ರಧಾನ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಆರಂಭದಿಂದಲೂ ಹೊಂದಿದ್ದ ಕನಸಾಗಿತ್ತು. ಹಲವು ವರ್ಷಗಳ ಪರಿಶ್ರಮ, ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿಯ ದೂರದೃಷ್ಟಿಯಿಂದ ಈ ಕನಸು ನನಸಾಗಿದೆ. ನೂತನ ಕಚೇರಿ ಸಂಘದ ಮುಂದಿನ ಬೆಳವಣಿಗೆಗೆ ಉತ್ತೇಜನ ನೀಡುವುದರೊಂದಿಗೆ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸುರೇಶ್ ಪ್ರಭು, ಗಣೇಶ್ ಕುಮಾರ್, ಅವಿನಾಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತಾ ಪ್ರವೀಣ್ ಉಪಸ್ಥಿತರಿದ್ದರು.