ಲೋಕಬಂಧು ನ್ಯೂಸ್ | ಉಡುಪಿ, ಏ.6
ರಾಮಭಕ್ತ ಹನುಮನಿದ್ದಲ್ಲಿ ಜಯ ಕಟ್ಟಿಟ್ಟ ಬುತ್ತಿ. ಆಂಜನೇಯನ ಆರಾಧನೆಯಿಂದ ಸಕಲ ಸಂಪತ್ತೂ ಪ್ರಾಪ್ತವಾಗುತ್ತದೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಪುನಃ ಪ್ರತಿಷ್ಠಾಪನೆ, ಬ್ರಹ್ಮಕುಂಭಾಭಿಷೇಕ ಹಾಗೂ ಬ್ರಹ್ಮಕಲಶೋತ್ಸವ ನಿಮಿತ್ತ ಭಾನುವಾರ ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇಂದ್ರಾಳಿ ದೇವಸ್ಥಾನದ ಪರಿಸರ ಉಳಿದೆಲ್ಲ ದೇಗುಲಗಳಿಗೆ ಮಾದರಿ, ಹನುಮನ ಅವತಾರ ಕಂಡ ನಾಡು ನಮ್ಮದು. ಮಧ್ವಾಚಾರ್ಯರೂ ಹನುಮನ ಅವತಾರವೇ ಆಗಿದ್ದರು. ಪ್ರಾಣದೇವರ ಆರಾಧನೆಯಿಂದ ಸಕಲ ಕಾರ್ಯಗಳೂ ಸಿದ್ದಿಯಾಗುತ್ತವೆ. ಎಲ್ಲಿ ಹನುಮನಿದ್ದಾನೋ ಅಲ್ಲಿಗೆ ರಾಮನೂ ಬರುತ್ತಾನೆ. ಇಲ್ಲಿ ಪುನಃಪ್ರತಿಷ್ಠಾಪನೆಗೊಂಡ ಮುಖ್ಯಪ್ರಾಣನ ಅನುಗ್ರಹ ಸಕಲ ಭಕ್ತರಿಗೂ ಲಭಿಸಲಿ ಎಂದು ಪುತ್ತಿಗೆ ಶ್ರೀಪಾದರು ಆಶಿಸಿದರು.
ಉಡುಪಿ ಅನಂತೇಶ್ವರ ದೇವಳ ಪ್ರಧಾನ ಅರ್ಚಕ, ವಿದ್ವಾಂಸ ಸಗ್ರಿ ವೇದವ್ಯಾಸ ಐತಾಳ್ ಧಾರ್ಮಿಕ ಉಪನ್ಯಾಸ ನೀಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅದಾನಿ ಸಮೂಹ ಸಂಸ್ಥೆಗಳ (ದಕ್ಷಿಣ ಭಾರತ) ಅಧ್ಯಕ್ಷ ಕಿಶೋರ್ ಆಳ್ವ, ಉಜ್ವಲ ಸಮೂಹ ಸಂಸ್ಥೆಗಳ ಮಾಲೀಕ ಅಜಯ್ ಪಿ. ಶೆಟ್ಟಿ ಮಾತನಾಡಿದರು.
ಇಂದ್ರಾಳಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಂಬೈ ವಿ.ಕೆ. ಗ್ರೂಪ್ ಆಫ್ ಕಂಪನೀಸ್ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿ, ಮುಂಬೈ ಡೊಂಬಿವಿಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬುಡ್ನಾರು ಬ್ರಹ್ಮಬೈದರ್ಕಳ ಗರೋಡಿಯ ಆನುವಂಶಿಕ ಮೊಕ್ತೇಸರ ಶೇಖರ್ ಶೆಟ್ಟಿ, ಇಂದ್ರಾಣಿ ಮುಖ್ಯಪ್ರಾಣ, ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್ ಶೆಟ್ಟಿ ಬುಡ್ನಾರು, ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಮಂಚಿಕೋಡಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸಾಧು ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ ಬುಡ್ಡಾರು, ಪಂಚದುರ್ಗಾಪರಮೇಶ್ವರಿ ದೇವಿ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ವಿಜಯ್ ಜೆ. ಮಂಟೆ, ಉದ್ಯಮಿ ನಾಗೇಶ್ ಹೆಗ್ಡೆ, ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು.
ಪ್ರಣಮ್ಯಾ ನಾಯಕ್ ಪ್ರಾರ್ಥಿಸಿದರು. ಇಂದ್ರಾಳಿ ಪಂಚದುರ್ಗಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ ಸ್ವಾಗತಿಸಿದರು. ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ ನಿರೂಪಿಸಿದರು. ಅತಿಥಿ ಸತ್ಕಾರ ಸಮಿತಿ ಸಂಚಾಲಕ ಶಿವಪ್ರಸಾದ್ ಶೆಟ್ಟಿ ವಂದಿಸಿದರು.
