ಜನ ಜಾಗೃತಿ ವೇದಿಕೆ ತ್ರೈಮಾಸಿಕ ಸಭೆ

ಲೋಕಬಂಧು ನ್ಯೂಸ್ ಉಡುಪಿ, ಮೇ 28
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್‌ನ 2026- 27ನೇ ಸಾಲಿನ ತ್ರೈಮಾಸಿಕ ಪ್ರಥಮ ಸಭೆ ಬ್ರಹ್ಮಗಿರಿಯ ಪ್ರಗತಿಸೌಧದ ಸಭಾಭವನದಲ್ಲಿ ಗುರುವಾರ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸತ್ಯಾನಂದ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.


ತಾಲೂಕು ವೇದಿಕೆ ಕಾರ್ಯದರ್ಶಿ ಹಾಗೂ ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ವರದಿ ವಾಚಿಸಿದರು.


ಎಲ್ಲಾ ವಲಯದ ಮೇಲ್ವಿಚಾರಕರು 2025- 26ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಸಾಧನ ವರದಿ ಮಂಡಿಸಿದರು.


2026- 27ನೇ ಸಾಲಿನ ಕ್ರಿಯಾಯೋಜನೆಯ ಅನುಷ್ಠಾನ ಕುರಿತು ಮಾಹಿತಿ ನೀಡಿದ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮೇ 31 ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಜೂನ್ 26 ಅಂತರರಾಷ್ಟ್ರೀಯ ಲ ಮಾದಕ ವಸ್ತು ವಿರೋಧಿ ದಿನಾಚರಣೆ, ತಾಲೂಕಿನಲ್ಲಿ ಒಟ್ಟು 15 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಎಲ್ಲಾ ವಲಯದಲ್ಲಿ ನವಜೀವನ ಸಮಿತಿ ಬಲಪಡಿಸುವ ಜೊತೆಗೆ ತಾಲೂಕು ಮಟ್ಟದ ನವಜೀವನೋತ್ಸವ ಕಾರ್ಯಕ್ರಮ, ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ತಾಲೂಕು ವೇದಿಕೆಯ ಸಭೆ ಬಗ್ಗೆ ಮಾಹಿತಿ ನೀಡಿ ವಲಯವಾರು ವಿಂಗಡಣೆ ಮಾಡಿದರು.ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ರಾಜು ಪೂಜಾರಿ ಉಪ್ಪೂರು ಸರ್ವಾನುಮತದಿಂದ ಆಯ್ಕೆಯಾದರು.
ಅವರನ್ನು ವೇದಿಕೆಯ ವತಿಯಿಂದ ಸ್ವಾಗತಿಸಲಾಯಿತು. ಜೊತೆಗೆ ಎಲ್ಲಾ ವಲಯದ ವಲಯ್ಯಾಧ್ಯಕ್ಷರ ಆಯ್ಕೆ ಮಾಡಲಾಯಿತು.


ಉಪ್ಪೂರು ಸುನಿಲ್ ಶೆಟ್ಟಿ, ಮಣಿಪಾಲ ವಸಂತ ಶೆಟ್ಟಿ, ಪೆರ್ಡೂರು ಸತೀಶ್ ಶೆಟ್ಟಿ, ಅಂಬಾಗಿಲು ಮಹಾಬಲ ಶೆಟ್ಟಿ, ಅಂಬಲಪಾಡಿ ಮಹೇಶ್ ಕುಮಾರ್, ಮಲ್ಪೆ ಉದಯ್ ಕುಮಾರ್ ಶೆಟ್ಟಿ, ಹಿರಿಯಡ್ಕ ನಳಿನಾ ಆಯ್ಕೆಯಾದರು.


ಪ್ರತಿಭಾ ಮತ್ತು ಚಂದ್ರಾವತಿ ಪ್ರಾರ್ಥಿಸಿದರು. ಮೇಲ್ವಿಚಾರಕ ಬಾಲಚಂದ್ರ ಸ್ವಾಗತಿಸಿ, ಪ್ರೇಮ ವಂದಿಸಿದರು. ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ ನಿರೂಪಿಸಿದರು.