ಲೋಕಬಂಧು ನ್ಯೂಸ್ ಉಡುಪಿ, ಮೇ 28
ಒಂದು ಕಾಲದಲ್ಲಿ ಮನುಷ್ಯನಿಗೆ ಕೃಷಿಯೇ ಆಧಾರವಾಗಿತ್ತು. ಇಂದು ಕೃಷಿ ಅಪ್ರಧಾನವಾಗಿದೆ. ದುಡ್ಡು ಗಳಿಸುವುದೇ ಪ್ರಧಾನವಾಗಿದೆ. ನಮ್ಮ ವೃತ್ತಿ, ಸಂಸ್ಕೃತಿಯನ್ನು ಬಿಟ್ಟು ವಲಸೆ ಹೋಗುತ್ತಿದ್ದೇವೆ. ಅದರಿಂದ ಪಾರಂಪರಿಕ ಕೃಷಿ ಕಣ್ಮರೆಯಾಗುತ್ತಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.ಸೋದೆ ವಾದಿರಾಜ ಮಠ ಮತ್ತು ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಸಂಸ್ಥೆ ಆಶ್ರಯದಲ್ಲಿ ರಥಬೀದಿಯ ಸೋದೆ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ 'ಬೊಗಸೆ ಭತ್ತ ಬೀಜ ಪ್ರದಾನ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಅದು ನಮ್ಮ ಅಸ್ಮಿತೆಯಾಗಿದೆ. ಹಿಂದೆ ಕೃಷಿ ಜಮೀನಿನ ಮೂಲಕವೇ ಓರ್ವ ವ್ಯಕ್ತಿಯ ಅಂತಸ್ತನ್ನು ಅಳೆಯಲಾಗುತ್ತಿತ್ತು. ಭತ್ತ ಬೆಳೆಸುವ ಜವಾಬ್ದಾರಿ ಕೇವಲ ರೈತರದ್ದು ಮಾತ್ರವಲ್ಲ, ಅನ್ನ ತಿನ್ನುವ ಪ್ರತಿಯೊಬ್ಬರಿಗೂ ಇದೆ. ಇಂದು ನಾವು ಆಹಾರ ವೈವಿಧ್ಯತೆ ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಒಟ್ಟುಗೂಡಿಸುವ ಸಣ್ಣ ಪ್ರಯತ್ನವನ್ನು ನಾವು ಈ ಕಾರ್ಯಕ್ರಮದ ಮೂಲಕ ಮಾಡುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮದಡಿ ಸಾವಯವ ಬೆಳೆಯುವ ರೈತರಿಗೆ ಬೆಂಬಲ ಬೆಲೆ, ಗೌರವ ಧನ ನೀಡಲಾಗುವುದು ಮತ್ತು ಅವರನ್ನು ಗೌರವಿಸಲಾಗುವುದು ಎಂದೂ ಹೇಳಿದರು.
ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಸಂಸ್ಥೆಯ ಶ್ರೀವತ್ಸ ಮಾತನಾಡಿ, ಗೋವು ಮತ್ತು ಕೃಷಿ ಭಾರತದಲ್ಲಿ ಒಂದಕ್ಕೊಂದು ಜೋಡಿಕೊಂಡಿವೆ. ಕೃಷಿ ನಮ್ಮಲ್ಲಿ ಸಂಸ್ಕೃತಿಯಾಗಿತ್ತು, ಉದ್ಯಮವಾಗಿರಲಿಲ್ಲ. ಕೃಷಿ ಸಂಸ್ಕೃತಿ ಉಳಿಯಬೇಕಾದರೆ ಕುಟುಂಬಗಳು ಉಳಿಯಬೇಕು ಎಂದರು.
ಹಾದಿಗಲ್ಲು ಲಕ್ಮೀನಾರಾಯಣ, ಆನಂದ, ಕೃಷಿ ಪ್ರಯೋಗ ಪರಿವಾರದ ಅರುಣ್ ಮತ್ತು ದಿನೇಶ ಮಾತನಾಡಿದರು.
ಸೋದೆ ವಾದಿರಾಜ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ವಂದಿಸಿದರು.