ಉಪ ಲೋಕಾಯುಕ್ತರ ದಿಢೀರ್ ಭೇಟಿ: 17 ಸ್ವಯಂಪ್ರೇರಿತ ಪ್ರಕರಣ ದಾಖಲು

ಲೋಕಬಂಧು ನ್ಯೂಸ್ | ಉಡುಪಿ, ಏ.10
ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಫೆ. 26 ಮತ್ತು 27ರಂದು ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ ದೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸುವ ಶಿಬಿರ ಹಮ್ಮಿಕೊಂಡ ಅವಧಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಆ ಸಂದರ್ಭದಲ್ಲಿ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ವಿವಿಧ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ 17 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕರ್ತವ್ಯದ ಅವಧಿಯಲ್ಲಿ ಅನುಮತಿ ಪಡೆಯದೇ ಪತ್ರಾಂಕಿತ ಸಹಾಯಕರು ತೆರಳಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಅಥವಾ ದಾಖಲೆ ನೀಡಲು ವಿಫಲರಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಬಗ್ಗೆ, ಕಚೇರಿಯ ಕೆಲವು ಸಿಬ್ಬಂದಿಗಳು ಗುರುತಿನ ಚೀಟಿ ಧರಿಸದಿರುವ ಬಗ್ಗೆ, ಹಾಜರಾತಿ ವಹಿ, ನಗದು ಘೋಷಣೆ ವಹಿ ಮತ್ತು ಚಲನವಲನ ವಹಿಯನ್ನು ಸರಕಾರದ ಮಾರ್ಗಸೂಚಿಯನ್ವಯ ನಿರ್ವಹಿಸದೇ ಇರುವುದು ಸೇರಿದಂತೆ ಹಲವು ಅಂಶಗಳಲ್ಲಿ ನ್ಯೂನತೆ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಇಲಾಖಾ ವತಿಯಿಂದ ಕಳೆದ ಎರಡು ವರ್ಷದಲ್ಲಿ ಹಮ್ಮಿಕೊಳ್ಳಲಾಗಿರುವ ಯೋಜನೆಗಳ ಕುರಿತು ಹಾಗೂ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.


ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಹಾಸ್ಟೆಲ್'ಗಳ ಸ್ವಚ್ಛತೆ ಸ್ಥಿತಿಗತಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ವಿವರ ಸೇರಿದಂತೆ ಇತರ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ಹಾಗೂ ದಾಖಲೆ ನೀಡದಿರುವ ಹಿನ್ನೆಲೆಯಲ್ಲಿ ಇಲಾಖೆಯ ವಿವಿಧ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.


ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿ ಜಿಲ್ಲೆಯಲ್ಲಿರುವ ಕ್ವಾರಿಗಳ ಸಂಖ್ಯೆ, ಪರವಾನಿಗೆ ಪಡೆದಿರುವ ಕ್ರಷರ್'ಗಳ ಸಂಖ್ಯೆ, ಪರವಾನಿಗೆ ಉಲ್ಲಂಘನೆ ಪ್ರಕರಣ, ಕ್ರಷರ್'ಗಳ ಕಾರ್ಯಾಚರಣೆ, ಕಾರ್ಮಿಕರಿಗೆ ವಿಮೆ ಇತ್ಯಾದಿ ಪ್ರಶ್ನೆಗಳಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ


ಉಡುಪಿ ತಾಲೂಕಿನ ತೆಂಕನಿಡಿಯೂರು ಪೊಟ್ಟು ಕೆರೆಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯತ್'ನಿಂದಾಗಲೀ ಅಥವಾ ನಗರಸಭೆಯಿಂದಾಗಲೀ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದ್ದು, ನಗರಸಭೆಯ ವಿವಿಧ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ.


ಮಣಿಪಾಲ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ, ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲರ್'ಗಳ ವಿರುದ್ಧ ಹಾಗೂ ಗಾಂಜಾ ತಯಾರು ಮಾಡುವವರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರಕದ ಹಿನ್ನೆಲೆಯಲ್ಲಿ ಠಾಣೆಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.


ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ನೀಡಿದ ಸಂದರ್ಭದಲ್ಲಿ, ಉಡುಪಿ ನಗರದ ತ್ಯಾಜ್ಯ ನೀರು ಸಮರ್ಪಕವಾಗಿ ಸಂಸ್ಕರಣೆ ಆಗದೇ ಇರುವ ಬಗ್ಗೆ ಆ ಘಟಕದಲ್ಲಿನ ನೀರಿನಲ್ಲಿ ಪಾಚಿ ಸಂಗ್ರಹವಾಗಿರುವುದು ಕಂಡುಬಂದಿರುವ ಬಗ್ಗೆ ಘಟಕದ ತ್ಯಾಜ್ಯ ನೀರು ಮತ್ತು ನಗರದ ಇತರ ಸಂಸ್ಕರಿಸದ ಕೊಳಚೆ ನೀರು ಚರಂಡಿ ಹಾಗೂ ನದಿಗಳ ಮೂಲಕ ಹರಿದು ಸಮುದ್ರ ಸೇರಿ ಕಲುಷಿತಗೊಳಿಸುತ್ತಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನೀರಾವರಿ ಇಲಾಖೆ ನಗರಸಭೆ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸದೆ ಕರ್ತವ್ಯ ಲೋಪ ಎಸಗಿರುವ ಬಗ್ಗೆ, ಕಲ್ಮಾಡಿ ಬ್ರಿಡ್ಜ್'ನಲ್ಲಿ ಹರಿಯುವ ಕಲುಷಿತ ನೀರಿನಿಂದ ಸೊಳ್ಳೆ, ನೊಣ, ವಿಷಜಂತುಗಳು ಹೆಚ್ಚಿದ್ದು, ಅವುಗಳಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿರುವ ಬಗ್ಗೆ, ಮಲ್ಪೆ ಸೀವಾಕ್ ಪ್ರದೇಶ ಹಾಗೂ ಬಂದರಿನ ಸುತ್ತಮುತ್ತ ಪ್ರದೇಶದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲ್, ಎಲ್ಲೆಂದರಲ್ಲಿ ಕಸವನ್ನು ಬಿಸಾಡಿದ್ದು ಆ ಬಗ್ಗೆ ಕ್ರಮ ವಹಿಸದಿರುವುದು ಸೇರಿದಂತೆ ಭೇಟಿ ಸಂದರ್ಭ ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.


ಮೀನುಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ಕಚೇರಿಗೆ ಸಂಬಂಧಿಸಿದಂತೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಕಾರಣ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.


ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಟೇಜ್ ಕ್ಯಾರಿಯರ್ಸ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ಸಂಖ್ಯೆ, ಅವುಗಳಿಗೆ ಜಿ.ಪಿ.ಎಸ್. ಅಳವಡಿಕೆ, ಕಳೆದ ಎರಡು ವರ್ಷದಲ್ಲಿ ಕಾನೂನು ಉಲ್ಲಂಘಿಸಿದ ವಾಹನಗಳು, ಅವುಗಳ ವಿರುದ್ಧ ಕೈಗೊಂಡ ಕ್ರಮ ಇತ್ಯಾದಿಗಳ ಬಗ್ಗೆ ಸಮರ್ಪಕ ದಾಖಲೆ ನೀಡದಿರುವುದು, ಖನಿಜ ಸಾಗಾಟ ವಾಹನಗಳ ಕಣ್ಗಾವಲು ಬಗ್ಗೆ ಚೆಕ್'ಪೋಸ್ಟ್'ಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮ, ಶಾಲಾ ವಾಹನಗಳ ಮಾರ್ಗಸೂಚಿ, ಚಾಲನಾ ಪರವಾನಿಗೆ, ಕಲಿಕೆಯ ಪರವಾನಿಗೆ ವಿತರಣೆ ಬಗ್ಗೆ ರಿಜಿಸ್ಟರ್ ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ಅಥವಾ ದಾಖಲಾತಿ ನೀಡದಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.


ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ರೆಸಾರ್ಟ್, ಲಾಡ್ಜ್ ಹಾಗೂ ಹೋಮ್-ಸ್ಟೇಗಳ ತ್ಯಾಜ್ಯ ವಿಲೇವಾರಿ, ನಿಯಮಾವಳಿ ಉಲ್ಲಂಘನೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.


ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತಗಳ ವಿಲೇ ಬಾಕಿ ವಸತಿ ಉದ್ದೇಶದ ಅರ್ಜಿ ಬಾಕಿ, ವಿನ್ಯಾಸ ಅನುಮೋದನೆ ಅರ್ಜಿ ಬಾಕಿ ಇತ್ಯಾದಿಗಳ ಬಗ್ಗೆ ಹಾಗೂ ಇ-ಕಚೇರಿ ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಲಾಗಿದೆ.


ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ದಿಢೀರ್ ಭೇಟಿ ನೀಡಿದ ಸಂದರ್ಬದಲ್ಲಿ 11-ಇ, ತತ್ಕಾಲ್ ಪೋಡಿ ಸೇರಿದಂತೆ ಹಲವು ಕಡತಗಳ ಬಾಕಿ, ಕಳೆದ 7 ವರ್ಷದಿಂದ ನಿವೃತ್ತ ಸೈನಿಕನ ಜಮೀನಿನ ಅಳತೆ ಮಾಡದಿರುವುದು ಇತ್ಯಾದಿ ನ್ಯೂನ್ಯತೆಗಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಉಡುಪಿ ನಗರಸಭೆ ಕಚೇರಿಯಲ್ಲಿ ಕಳೆದ ಮೂರು ವರ್ಷದಲ್ಲಿ ಕೈಗೊಂಡ ಕಾಮಗಾರಿ ವಿವರ, ವಾಹನಗಳ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ, ಇ-ಆಸ್ತಿ ಬಾಕಿ ಅರ್ಜಿ ವಿವರ, ಉದ್ದಿಮೆ ಪರವಾನಿಗೆ, ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ ಅಕ್ರಮ ಕಟ್ಟಡ ನಿರ್ಮಾಣ ಮತ್ತಿತರ ವಿಚಾರಗಳ ನ್ಯೂನ್ಯತೆ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.


ಜಿಲ್ಲಾ ಸಾರ್ಜಜನಿಕ ಆಸ್ಪತ್ರೆಯಲ್ಲಿ ಜನನ ಹಾಗೂ ಮರಣ ಪ್ರಮಾಣದ ಅನೇಕ ಪತ್ರಗಳು ಸಂಬಂಧಪಟ್ಟವರಿಗೆ ಪೋಸ್ಟ್ ಮಾಡದಿರುವುದು, ಔಷಧಿ ವಿತರಣಾ ಕೇಂದ್ರ, ನೋಂದಣಿ ಕೇಂದ್ರ, ಆಸ್ಪತ್ರೆಯ ಕೆಲವು ವೈದ್ಯರು ಹಾಗೂ ಸಿಬ್ಬಂದಿ ಸಮವಸ್ತ್ರ ಧರಿಸದಿರುವುದು, ನಿರುಪಯುಕ್ತ ವಸ್ತುಗಳ ವಿಲೇ ಮಾಡದಿರುವುದು, ಅಸಮರ್ಪಕ ಕ್ಯಾಂಟೀನ್ ನಿರ್ವಹಣೆ ಬಗ್ಗೆ ದೂರು ದಾಖಲಾಗಿದೆ.


ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ದೂರುಗಳ ಕಡತ ನಿರ್ವಹಿಸದಿರುವುದು, ಗುತ್ತಿಗೆ ನೌಕರರ ಬ್ಯಾಗ್'ಗಳಲ್ಲಿ ಅನೇಕ ಖಾಸಗಿ ದಾಖಲೆ ಮತ್ತಿತರ ನ್ಯೂನ್ಯತೆ ಕಂಡುಬಂದಿರುವುದರಿಂದ ದೂರು ದಾಖಲಿಸಲಾಗಿದೆ.


ಉಡುಪಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆರ್.ಆರ್.ಟಿ. ಕಡತ, ತತ್ಕಾಲ್ ಪೋಡಿ ಕಡತ, ನಮೂನೆ 57, ಇ-ಪೌತಿ ಖಾತೆಗಳ ಕಡತ ವಿಲೇವಾರಿಗೆ ಬಾಕಿ, ಅನಧಿಕೃತ ಚಿಟ್ ಫಂಡ್ ವ್ಯವಹಾರ ಇತ್ಯಾದಿಗಳ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.