ಏ.25ರಂದು ಮಲ್ಪೆಯಲ್ಲಿ ಆಳ್ವಾಸ್ ರೀಚ್

ಲೋಕಬಂಧು ನ್ಯೂಸ್ ಉಡುಪಿ, ಏ.22
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗ ಆಶ್ರಯದಲ್ಲಿ `ಟೀಂ ಈಶ್ವರ ಮಲ್ಪೆ' ತಂಡ ಹಾಗೂ ಸಮಾಜಕಾರ್ಯ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಏ.25ರಂದು ಮಲ್ಪೆ ಕಡಲ ಕಿನಾರೆಯಲ್ಲಿ `ಆಳ್ವಾಸ್ ರೀಚ್' ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಯೋಜಕ ಕೃಷ್ಣಮೂರ್ತಿ ಬಿ. ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಸೋಶಿಯಲ್ ವರ್ಕ್ ಫಾರ್ ಆಡ್ರೆಸಿಂಗ್ ಯೂತ್ ಎಟ್ ರಿಸ್ಕ್' (ಅಪಾಯದಲ್ಲಿರುವ ಯುವಜನತೆಯ ಸಮಸ್ಯೆಗೆ ಸ್ಪಂದಿಸುವಲ್ಲಿ ಸಮಾಜಕಾರ್ಯ) ಎಂಬ ವಿಷಯದೊಂದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಪೂರ್ವಭಾವಿಯಾಗಿ ಸಮಾಜಕಾರ್ಯ ವಿಭಾಗ ತನ್ನ ಬೆಳ್ಳಿಹಬ್ಬ ವರ್ಷಾಚರಣೆ ಪ್ರಯುಕ್ತ 'ಟೀಂ ಈಶ್ವರ ಮಲ್ಪೆ' ತಂಡದ ಮುಖ್ಯಸ್ಥ ಕರ್ನಾಟಕದ `ಅಕ್ವಾ ಮ್ಯಾನ್' (ಜಲದಲ್ಲಿ ಜನಜೀವ ರಕ್ಷಕ) ಎಂದು ಖ್ಯಾತರಾದ ಈಶ್ವರ ಮಲ್ಪೆ ಅವರನ್ನು ರಾಯಭಾರಿಯಾಗಿ ನೇಮಿಸಿದೆ. `ಯೂತ್ ಎಟ್ ರಿಸ್ಕ್: ಬಿ ಸೇಫ್ ಸೇವ್ ಲೈಫ್' (ಅಪಾಯದಲ್ಲಿ ಯವಜನತೆ: ಜಾಗರೂಕರಾಗಿರಿ ಮತ್ತು ಜೀವ ಉಳಿಸಿ) ಎಂಬ ಧೈಯವಾಕ್ಯದೊಂದಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ನಡೆಸಿದ ಜಾಗೃತಿ ಅಭಿಯಾನದ ಸಮಾಪನ ಮತ್ತು `ಸೋಶಿಯಲ್ ವರ್ಕ್ ಫಾರ್ ಅಡ್ರೆಸಿಂಗ್ ಯೂತ್ ಎಟ್ ರಿಸ್ಕ್' ವಿಷಯದೊಂದಿಗೆ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿ, ಜಾಗೃತಿ ಜಾಥಾ, ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭದೊಂದಿಗೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದರು.


ಅಂದು ಬೆಳಿಗ್ಗೆ 10.30ಕ್ಕೆ ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ನಂತರ ವಸ್ತುವಿಷಯಾಧಾರಿತ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಟಿ, ಹಳೆ ವಿದ್ಯಾರ್ಥಿಗಳ ಸಂಗಮದೊಂದಿಗೆ ಸಂಜೆ ಗಂಟೆ 4ರಿಂದ ಜಾಗೃತಿ ಜಾಥಾ ಏರ್ಪಡಿಸಲಾಗಿದೆ.


ಮಲ್ಪೆ ಗಾಂಧಿ ಸ್ಮಾರಕ ಪುತ್ಥಳಿಯ ಸಮೀಪ ವಿಶೇಷವಾಗಿ ನಿರ್ಮಿಸಲ್ಪಟ್ಟ ತೆರೆದ ವೇದಿಕೆಯಲ್ಲಿ ವಸ್ತುವಿಷಯ ಕುರಿತ ಅರಿವು ಕಾರ್ಯಕ್ರಮ ಸಂಜೆ 5ರಿಂದ ಕಲರ್ಸ್ ಕನ್ನಡ ಖ್ಯಾತಿಯ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕಿ ಕಲಾವತಿ ದಯಾನಂದ್ ನೇತೃತ್ವದ ಉಡುಪಿಯ ಕಲಾಸಿಂಧು ಸಂಗೀತ ಬಳಗದವರಿಂದ ಸುಗಮ ಸಂಗೀತ, ಸಂಜೆ 6.30ರಿಂದ ನೂತನ ಆ್ಯಂಬುಲೆನ್ಸ್ ವಾಹನ ಸೇವೆ ಲೋಕಾರ್ಪಣೆ, ಸನ್ಮಾನ ಮತ್ತು ಸಮಾರೋಪ ಸಮಾರಂಭ, ಬಳಿಕ ಗೋಳಿಯಂಗಡಿ ಕಲಾಶ್ರೀ ನಾಟ್ಯಾಲಯದವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.


ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿಗಳಾದ ಆನಂದ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ, ಮಲ್ಪೆ ವಾರ್ಡ್ ಕೌನ್ಸಿಲರ್ ಲಕ್ಷ್ಮೀ ಮಂಜುನಾಥ್, ಮಂಗಳೂರು ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ರಶ್ಮಿ ಹರಿಪ್ರಸಾದ್, ಮಲ್ಪೆ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಡಿ., ಮಲ್ಪೆ ಅಡ್ವೆಂಚರ್ ಸ್ಪೋರ್ಟ್ಸ್'ನ ಶಾನ್ ರಾಜ್, ಜಾಗೃತಿ ಅಭಿಯಾನದ ರಾಯಭಾರಿ ಈಶ್ವರ ಮಲ್ಪೆ, ಅಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ಕೆ., ಸಮಾವೇಶದ ಸಂಯೋಜಕ ಕೃಷ್ಣಮೂರ್ತಿ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಪತಿ ಭಟ್, ಪದಾಧಿಕಾರಿಗಳಾದ  ಸ್ಮಿತಾ ಬಿ.ಎಸ್., ಮುಕುಂದರಾಜ್, ಡಾ.ಶ್ರೀದೇವಿ ಕೆ., ಸುಕೇಶ್ ಶೆಟ್ಟಿ, ಮಲ್ಪೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ., ಹಿರಿಯ ಅಧ್ಯಾಪಕ ಸತೀಶ್ ಭಟ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.



ಸುದ್ದಿಗೋಷ್ಟಿಯಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲಾ ಕೆ. ಹಾಗೂ ಜಾಗೃತಿ ಅಭಿಯಾನದ ರಾಯಭಾರಿ ಈಶ್ವರ ಮಲ್ಪೆ ಇದ್ದರು.