ಲೋಕಬಂಧು ನ್ಯೂಸ್ | ಪಡುಬಿದ್ರಿ, ಏ.20
ಸುಮಾರು 35 ಕೋ.ರೂ. ವೆಚ್ಚದಲ್ಲಿ ನವೀಕರಿಸಲಾದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಏ.23ರಿಂದ ಮೇ 14ರ ವರೆಗೆ ಶ್ರೀ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹಾರಥೋತ್ಸವ ಶ್ರೀ ಕ್ಷೇತ್ರದ ತಂತ್ರಿಗಳಾದ ಕೊಡವೂರು ಕಂಬ್ಳೆಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ಶ್ರೀ ದೇವಳದ ಅರ್ಚಕ ವೃಂದದ ಸಹಕಾರದೊಂದಿಗೆ ವೈಭವದಿಂದ ನಡೆಯಲಿದೆ ಎಂದು ಶ್ರೀಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ ಡಾ.ಕೆ.ಪ್ರಕಾಶ್ ಶೆಟ್ಟಿ ತಿಳಿಸಿದರು.
ಸೋಮವಾರ ಶ್ರೀದೇವಳದಲ್ಲಿ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ದೇವಳದ ಜೋರ್ಣೋದ್ಧಾರಕ್ಕೆ ಸಂಕಲ್ಪಿಸಿದ ಸುಮಾರು 7 ತಿಂಗಳೊಳಗಾಗಿ ಶಿಲಾಮಯ ದೇವಳ ಸಿದ್ಧಗೊಂಡಿದೆ ಎಂದರು.
ವೈಭವದ ಶೋಭಾಯಾತ್ರೆ
ಏ.23ರಂದು ಬೆಳಿಗ್ಗೆ 10 ಗಂಟೆಗೆ ದಾನಿಗಳಿಂದ ಶ್ರೀದೇವರಿಗೆ ಸಮರ್ಪಿಸಲ್ಪಡುವ ದಿವ್ಯಾಭರಣಗಳು ಹಾಗೂ ಇತರ ಪರಿಕರಗಳ ಶೋಭಾಯಾತ್ರೆ ಪಡುಬಿದ್ರಿ ಗುಂಡ್ಲಾಡಿಕಟ್ಟೆಯಿಂದ ಶ್ರೀದೇವಳಕ್ಕೆ ಆಗಮಿಸಲಿದೆ. ಸಂಜೆ 5 ಗಂಟೆಗೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಪುನಃಪ್ರತಿಷ್ಠೆ- ಕುಂಭಾಭಿಷೇಕ
ಏ.29ರಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬೆಳಿಗ್ಗೆ 10.27 ಗಂಟೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ, ಏ.30ರಂದು ಬೆಳಿಗ್ಗೆ 8.02 ಗಂಟೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಗಣಪತಿ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ. ಮೇ 2ರಂದು ಬೆಳಿಗ್ಗೆ 8.05ರ ವೃಷಭ ಲಗ್ನಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಮೇ 3ರಂದು ಬೆಳಿಗ್ಗೆ 9.49ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ ಎಂದು ಡಾ.ಪ್ರಕಾಶ ಶೆಟ್ಟಿ ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮ
ಶ್ರೀಕ್ಷೇತ್ರದಲ್ಲಿ ಏ.23ರಂದು ಋತ್ವಿಜರ ಆಗಮನ, ಸ್ವಾಗತ, ಗೇಹ ಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ತೋರಣ ಪ್ರತಿಷ್ಠೆಯೊಂದಿಗೆ ಆರಂಭಿಸಿ ಮೇ 14ರ ಮಹಾಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ, ರಾತ್ರಿ ರಂಗಪೂಜೆ ವರೆಗೆ ನಿತ್ಯ ಪ್ರಾತಃಕಾಲದಿಂದ ರಾತ್ರಿ ವರೆಗೆ ಶ್ರೀಕ್ಷೇತ್ರದ ತಂತ್ರಿಗಳು, ಅರ್ಚಕರು, ಋತ್ವಿಜರ ಭಾಗವಹಿಸುವಿಕೆಯಲ್ಲಿ ವಿವಿಧ ಯಾಗಗಳ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಏ.25ರಂದು ಅಪರಾಹ್ನ 4 ಗಂಟೆಗೆ ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್ ವತಿಯಿಂದ ಶ್ರೀ ಗಣಪತಿ ದೇವರ ಗರ್ಭಗುಡಿಗೆ ರಜತದ್ವಾರ ಹಾಗೂ ಶ್ರೀ ದೇವಳಕ್ಕೆ ಸಮರ್ಪಿಸಲ್ಪಡುವ ಸ್ವರ್ಣಪಲ್ಲಕಿ ಸಮರ್ಪಣಾ ಶೋಭಾಯಾತ್ರೆ ನಡೆಯಲಿದೆ.
ಹೊರೆಕಾಣಿಕೆ
ಏ.26ರಂದು ಮಧ್ಯಾಹ್ನ 3 ಗಂಟೆಯಿಂದ ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಶ್ರೀಕ್ಷೇತ್ರಕ್ಕೆ ಸಮರ್ಪಿಸಲ್ಪಡುವ ಹಸಿರುವಾಣಿ ಹೊರೆಕಾಣಿಕೆಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಧಾರ್ಮಿಕ ಸಭೆ
ಏ.23, 25, 27 ಮತ್ತು 29, ಮೇ 1 ಮತ್ತು 3ರಂದು ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು, ಸಚಿವರು, ಸಂಸದರು, ಅವಿಭಜಿತ ದ.ಕ. ಜಿಲ್ಲೆಗಳ ಎಲ್ಲಾ ಶಾಸಕರು, ದಾನಿಗಳು, ಗಣ್ಯರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಏ.23ರಿಂದ ಮೇ 14ರ ವರೆಗೆ ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನೆ, ಬೆಳಿಗ್ಗೆ 11 ಗಂಟೆಯಿಂದ ನಿತ್ಯ ಪ್ರತಿಷ್ಠಿತ ತಂಡಗಳಿಂದ ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ನಡೆಯಲಿದೆ. ಶ್ರೀಕ್ಷೇತ್ರಕ್ಕೆ ಸಂಬಂಧಿತ ವೀಡಿಯೊ, ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ.
ಶ್ರೀಕ್ಷೇತ್ರದ ಬ್ರಹ್ಮಕಲಶಾಭಿಷೇಕ ಅಂಗವಾಗಿ ಮೇ 2ರಂದು ರಾತ್ರಿ 8 ಗಂಟೆಗೆ ಬ್ರಹ್ಮಕಲಶೋತ್ಸವದ ಮಹಾರಥೋತ್ಸವ ನಡೆಯಲಿದೆ. ಮೇ 4ರಂದು ರಾತ್ರಿ 9 ಗಂಟೆಗೆ ಲಕ್ಷದೀಪೋತ್ಸವ, ಮೇ 5ರಂದು ವಾರ್ಷಿಕ ಉತ್ಸವ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆದು ಮೇ 10ರಂದು ರಾತ್ರಿ ಕೆರೆ ದೀಪೋತ್ಸವ, ಮೇ 12ರಂದು ಬೆಳಿಗ್ಗೆ 11 ಗಂಟೆಗೆ ರಥಾರೋಹಣ, ರಾತ್ರಿ 11 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ಅನ್ನಸಂತರ್ಪಣೆ
ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಂಭ್ರಮ ಅಂಗವಾಗಿ ಏ.23ರಿಂದ ಮೇ 4ರ ವರೆಗೆ ಮತ್ತು ವಾರ್ಷಿಕ ಉತ್ಸವ ಅಂಗವಾಗಿ ಮೇ 12ರಂದು ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಾಶ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ರತ್ನಾಕರ ರಾಜ್ ಬೀಡು, ಭವಾನಿಶಂಕರ ಹೆಗ್ಡೆ ಪೇಟೆಮನೆ, ರವೀಂದ್ರನಾಥ ಜಿ.ಹೆಗ್ಡೆ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿನಾಥ ಶೆಟ್ಟಿ ಉಪಸ್ಥಿತರಿದ್ದರು.
.jpg)