ಲೋಕಬಂಧು ನ್ಯೂಸ್ ಪಡುಬಿದ್ರಿ, ಏ.23
ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮಾಜ ಮತ್ತು ಹತ್ತು ಸಮಸ್ತರು ಹಾಗೂ ಆಡಳಿತ ಮಂಡಳಿ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಮರ್ಪಿಸಲಿರುವ ಸುಮಾರು 1.20 ಕೋ.ರೂ. ವೆಚ್ಚದ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ ರಜತ ದ್ವಾರ ಶೋಭಾಯಾತ್ರೆ ಏ. 25ರಂದು ಅಪರಾಹ್ನ 3.30ಕ್ಕೆ ನಡೆಯಲಿದೆ ಎಂದು ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ತಿಳಿಸಿದರು.ಖಡ್ಗೇಶ್ವರಿ ಜ್ಞಾನ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಾಯಾತ್ರೆಯಲ್ಲಿ ಭಜನಾ ತಂಡ, ಚೆಂಡೆ ವಾದನದೊಂದಿಗೆ ಬ್ರಹ್ಮಸ್ಥಾನ ಮಾರ್ಗವಾಗಿ ಪಡುಬಿದ್ರಿ ಪೇಟೆ ಮೂಲಕ ದೇವಳಕ್ಕೆ ಸಾಗಿಬರಲಿದೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಪಡುಬಿದ್ರಿ ದೇವಳದ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ಜನಪದ ಸಂಶೋಧಕ ಕೆ.ಎಲ್. ಕುಂಡಂತಾಯ, ಪಡುಬಿದ್ರಿ ಮಠತ್ರಾಮಮನೆ ಗಂಗಾಧರ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಕ್ಷೇತ್ರದ ಅರ್ಚಕರಾದ ಎಚ್. ಪದ್ಮನಾಭ ಭಟ್ ಮತ್ತು ವೈ. ಗುರುರಾಜ ಭಟ್, ಆನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿ ಶಂಕರ್ ಹೆಗ್ಡೆ ಉಪಸ್ಥಿತರಿರುವರು.
ಕೊರ್ನಾಯ ಪದ್ಮನಾಭ ರಾವ್ ಅಧ್ಯಕ್ಷತೆ ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ವನದುರ್ಗಾ ಟ್ರಸ್ಟ್‌ನ ಒಂದನೇ ಗುರಿಕಾರ ಕೊರ್ನಾಯ ಪದ್ಮನಾಭ ರಾವ್, ಕೋಶಾಧಿಕಾರಿ ಸುರೇಶ್ ರಾವ್ ವೈ., ಎರಡನೇ ಗುರಿಕಾರ ನಟರಾಜ ಪಿ.ಎನ್, ಮೂರನೇ ಗುರಿಕಾರ ಮುರುಡಿ ಜಗದೀಶ್ ರಾವ್, ಟ್ರಸ್ಟ್ ಸದಸ್ಯರಾದ ಪಿ. ಶ್ರೀನಿವಾಸ ರಾವ್, ರವೀಂದ್ರ ಪಿ. ಎಚ್. ಇದ್ದರು.