ಲೋಕಬಂಧು ನ್ಯೂಸ್ ಉಡುಪಿ, ಏ.29
ಇತ್ತೀಚೆಗೆ ಕೊಡಗು ಜಿಲ್ಲೆಯ ಹೋಮ್ ಸ್ಟೇವೊಂದರಲ್ಲಿ ನಡೆದ ವಿದೇಶಿ ಮಹಿಳೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಮಹಾನಿರ್ದೇಶಕರ ಸೂಚನೆ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಉಡುಪಿ ಜಿಲ್ಲೆಯಲ್ಲಿ 32 ಅಕ್ರಮ ಹೋಮ್ ಸ್ಟೇ ಪತ್ತೆ ಮಾಡಿದ್ದಾರೆ.ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ವರದಿ ನೀಡಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಹೋಮ್ ಸ್ಟೇ ಅಥವಾ ರೆಸಾರ್ಟ್'ಗಳು ಪರವಾನಿಗೆಯ ನಿಯಮ ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಉಲ್ಲಂಘಿಸಿದಲ್ಲಿ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಹೋಮ್ ಸ್ಟೇ ಅಥವಾ ರೆಸಾರ್ಟ್'ಗಳಿಗೆ ವಿದೇಶಿಯರು ಆಗಮಿಸಿದಾಗ ನಿಯಮಾನುಸಾರ ಅವರ ವಿವರಗಳನ್ನು ಪಡೆದುಕೊಂಡು ಕಡ್ಡಾಯವಾಗಿ ಅಪ್‌ಲೋಡ್ ಮಾಡಿ, ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಹೋಮ್ ಸ್ಟೇ ಅಥವಾ ರೆಸಾರ್ಟ್'ಗಳಲ್ಲಿ ವಾಸವಾಗಿರುವ ವಿದೇಶಿಯರ ಭದ್ರತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಸ್ಪಿ ತಿಳಿಸಿದ್ದಾರೆ.