ಲೋಕಬಂಧು ನ್ಯೂಸ್ | ಉಡುಪಿ, ಏ.25
ಮಣಿಪಾಲದಲ್ಲಿ ತಡರಾತ್ರಿ ರಸ್ತೆಯಲ್ಲಿಯೇ ಯುವಕ-ಯುವತಿಯ ಅಸಭ್ಯ ವರ್ತನೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಯಲ್ಲೇ ಪ್ರಣಯ ಸಲ್ಲಾಪಕ್ಕಿಳಿದ ಜೋಡಿ, ಸುತ್ತಮುತ್ತಲಿನ ಜನರಲ್ಲಿ ಆಕ್ರೋಶ ಮೂಡಿಸಿದೆ. ಈ ವೀಡಿಯೊ ವೈರಲ್ ಆಗಿದೆ.
ಯುವ ಜೋಡಿಯೊಂದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಕೆಲವರು ತರಾಟೆಗೆ ತೆಗೆದುಕೊಂಡರು. ವಿದೇಶಗಳಲ್ಲಿ ಕಾಣಿಸಿಕೊಳ್ಳುವ ರೀತಿಯ ವರ್ತನೆಯನ್ನು ಅನುಸರಿಸುತ್ತಿರುವಂತೆ ಕಂಡ ಈ ಘಟನೆ, ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.
ಮಣಿಪಾಲ ಗುಣಮಟ್ಟದ ಶಿಕ್ಷಣಕ್ಕಾಗಿ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಮುಖ ವಿದ್ಯಾಕೇಂದ್ರವಾಗಿದೆ. ಹೈಟೆಕ್ ವಾತಾವರಣದ ಪರಿಣಾಮವಾಗಿ ಕೆಲವು ಯುವಕರು ವಿದೇಶಗಳಂತೆ ಸ್ವಚ್ಛಂದವಾಗಿ ವರ್ತಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ವಿಶೇಷವಾಗಿ ಹೊಸ ವರ್ಷ ಹಾಗೂ ವ್ಯಾಲೆಂಟೈನ್ ಡೇ ಸಂದರ್ಭಗಳಲ್ಲಿ ಇಂಥ ಘಟನೆಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡಬೇಕು, ಈ ರೀತಿಯ ಅಸಭ್ಯ ವರ್ತನೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಉಡುಪಿ ಮಂದಿ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.