ಏ.9: ಪಿಯುಸಿ ಫಲಿತಾಂಶ ಪ್ರಕಟ

ಲೋಕಬಂಧು ನ್ಯೂಸ್ ಬೆಂಗಳೂರು, ಏ.8
ಕಳೆದ ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ  ಫಲಿತಾಂಶ ಏಪ್ರಿಲ್ 9ರಂದು ಪ್ರಕಟವಾಗಲಿದೆ.ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಫಲಿತಾಂಶ ಪ್ರಕಟಣೆ ಕ್ರಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಅಪರಾಹ್ನ 3 ಗಂಟೆಯಿಂದಲೇ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.


ಈ ಹಿಂದೆ ಮೊದಲು ಸುದ್ದಿಗೋಷ್ಠಿ ನಡೆಸಿ ನಂತರ ಫಲಿತಾಂಶ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮೊದಲು ವೆಬ್‌ಸೈಟ್‌ನಲ್ಲಿ ರಿಸಲ್ಟ್ ಅಪ್‌ಲೋಡ್ ಆದ ನಂತರ ಸಂಜೆ 6.15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಪರೀಕ್ಷೆ ಫಲಿತಾಂಶದ ಸಾರಾಂಶ ಹಂಚಿಕೊಳ್ಳಲಿದ್ದಾರೆ.


ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://karresults.nic.in ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು. ಜೊತೆಗೆ ‘ಕರ್ನಾಟಕ ಒನ್’ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಲಭ್ಯವಿದ್ದು, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕವೂ ಮಾಹಿತಿ ರವಾನಿಸಲು ಇಲಾಖೆ ಸಜ್ಜಾಗಿದೆ.


ಈ ವರ್ಷ ಮೊತ್ತಮೊದಲ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್ ಮೂಲಕ ನೀಡಲಾಗುತ್ತಿದೆ. ಏ.9ರಂದು ಅಪರಾಹ್ನ 3 ಗಂಟೆ ನಂತರ ವಿದ್ಯಾರ್ಥಿಗಳು https://www.digilocker.gov.in/ ವೆಬ್‌ಸೈಟ್ ಬಳಸಿ ತಮ್ಮ ಡಿಜಿಟಲ್ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


ರಾಜ್ಯದ ಒಟ್ಟು 1,217 ಕೇಂದ್ರಗಳಲ್ಲಿ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶ ಪ್ರಕಟಗೊಂಡ ಬಳಿಕ ಸಂಜೆ 3 ಗಂಟೆ ನಂತರ ಆಯಾ ಕಾಲೇಜುಗಳಿಗೂ ಫಲಿತಾಂಶದ ಪಟ್ಟಿ ರವಾನಿಸಲಾಗುವುದು ಎಂದು ಇಲಾಖೆ ತಿಳಿಸಿದೆ.