ಲೋಕಬಂಧು ನ್ಯೂಸ್ | ಬ್ರಹ್ಮಾವರ, ಏ.6
ಯವಜನತೆ ಕೇವಲ ಸರ್ಕಾರಿ ಉದ್ಯೋಗಕ್ಕಾಗಿ ಕಾಯದೇ ಸ್ವಯಂ ಉದ್ಯೋಗ ಕೈಗೊಂಡು ಭವ್ಯ ಬದುಕು ರೂಪಿಸಿಕೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಯುವಜನತೆಗೆ ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಇಲ್ಲಿನ ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ಜಿಲ್ಲೆಯ 35 ಮಂದಿ ಅಭ್ಯರ್ಥಿಗಳಿಗೆ ಆಯೋಜಿಸಲಾದ ಕೌಶಲ್ಯ ತರಬೇತಿಯ ಪ್ರಶಿಕ್ಷಣಾರ್ಥಿಗಳಿಗೆ ಸೋಮವಾರ ಉಚಿತ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
18ರಿಂದ 35 ವರ್ಷ ವಯಸ್ಸಿನ ಗ್ರಾಮೀಣ ಬಡ ಯುವಜನತೆಗೆ ಈ ಯೋಜನೆಯಡಿ ಉಚಿತ ತರಬೇತಿ ಮತ್ತು ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. 3 ತಿಂಗಳ ಉಚಿತ ತರಬೇತಿ ಅವಧಿಯಲ್ಲಿ ಮಾಸಿಕ 3,500 ರೂ. ಶಿಷ್ಯವೇತನ ನೀಡಲಾಗುವುದು. ಉದ್ಯೋಗ ದೊರೆತ ನಂತರ ಪ್ರತಿ ತಿಂಗಳು 1,200 ರೂ.ನಂತೆ ಒಟ್ಟು 6 ತಿಂಗಳ ಅವಧಿಗೆ 7,200 ರೂ. ಸಹಾಯಧನವನ್ನು ಅಭ್ಯರ್ಥಿಗಳ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ಪಾವತಿಸಲಾಗುತ್ತದೆ. ಜಿಲ್ಲೆಯ ಅಭ್ಯರ್ಥಿಗಳು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸದ ಕೋಟ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ, ದೇಶದ ಅಭಿವೃದ್ಧಿಗೆ ಕೌಶಲ್ಯಾಧಾರಿತ ತರಬೇತಿ ಮತ್ತು ಉದ್ಯೋಗ ಅತ್ಯಂತ ಪ್ರಮುಖವಾಗಿದ್ದು, ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕ್ರಾಸ್ ಲ್ಯಾಂಡ್ ಕಾಲೇಜು ಪ್ರಾಂಶುಪಾಲ ಡಾ.ರಾಬರ್ಟ್ ಕ್ಲೈವ್, ತರಬೇತಿ ಮುಖ್ಯಸ್ಥ ಗಣೇಶ್ ಪೂಜಾರಿ ಇದ್ದರು.
ಜಿ.ಪಂ. ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಪ್ರಸ್ತಾವನೆಗೈದರು. ದೀಪಾ ಅನಂತ ರಾವ್ ಕಿತ್ತೂರು ಸ್ವಾಗತಿಸಿ, ನಿರೂಪಿಸಿದರು.
