ಕ್ರಿಕೆಟ್ ಮಾದರಿಯಲ್ಲೇ ಬಾಸ್ಕೆಟ್‌ಬಾಲ್ ಕ್ರೀಡೆಗೂ ಪ್ರೋತ್ಸಾಹ ಅಗತ್ಯ

ಲೋಕಬಂಧು ನ್ಯೂಸ್ | ಉಡುಪಿ, ಏ.20
ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಅಧಿಕೃತ ಮಾನ್ಯತೆ ಪಡೆದ ನೂತನ ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಸೋಮವಾರ ಉದ್ಘಾಟನೆಗೊಂಡಿತು.
ಮಣಿಪಾಲದ ಮಾಧವ ಕೃಪಾ ಶಾಲೆಯ ಆವರಣದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅಸೋಸಿಯೇಷನ್‌ಗೆ ಚಾಲನೆ ನೀಡಿ ಲೋಗೊ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸಾದ್ ರಾಜ್ ಕಾಂಚನ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಪೂರ್ಣ ಸಹಕಾರ ಇದೆ. ಈಚಿನ ದಿನಗಳಲ್ಲಿ ಕ್ರಿಕೆಟ್‌ಗೆ ಮಾತ್ರ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಬಾಸ್ಕೆಟ್‌ಬಾಲ್ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.


ಆರು ತಿಂಗಳಲ್ಲಿ ರಾಜ್ಯ ಮಟ್ಟದ ಟೂರ್ನಮೆಂಟ್
ಕಾರ್ಯಕ್ರಮದಲ್ಲಿ ಮಾತನಾಡಿದ ಅಸೋಸಿಯೇಷನ್ ನೂತನ ಜಿಲ್ಲಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ನಗರ ಮಾತ್ರವಲ್ಲ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ. ಉಡುಪಿಯಲ್ಲಿ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಸ್ಟೇಡಿಯಂ ನಿರ್ಮಿಸಿ ಆರು ತಿಂಗಳಲ್ಲಿ ರಾಜ್ಯ ಮಟ್ಟದ ಟೂರ್ನಮೆಂಟ್ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಮಕ್ಕಳು ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಮಾಹೆ ಜೊತೆಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಸಿದ್ಧಗೊಳಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಕಳಿಸುವ ಯೋಜನೆ ಇದೆ ಎಂದರು.


ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಜುಗನ್ ಎಸ್. ಧ್ಯಾನೇಶ್ವರನ್, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ, ಚಂದ್ರಶೇಖರ್ ಪ್ರಭು, ಎ.ಕೆ.ಹುಸೇನ್, ವಿನಯ್ ಮೊಯ್ಲಿ, ನೂತನ ಅಸೋಸಿಯೇಷನ್‌ನ ಪದಾಧಿಕಾರಿಗಳು ಮೊದಲಾದವರಿದ್ದರು.


ಬಳಿಕ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟಗಳಿಗೆ ಚಾಲನೆ ನೀಡಲಾಯಿತು.