ಲೋಕಬಂಧು ನ್ಯೂಸ್ ಬ್ರಹ್ಮಾವರ, ಏ.29
ಇತ್ತೀಚಿಗೆ ಬ್ರಹ್ಮಾವರದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಎಚ್ಎಂಸಿ ಯುನೈಟೆಡ್ ಟ್ರೋಫಿ 2026, ಕೆಲವರ ಒಳಸಂಚಿನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡು ವಿವಾದಕ್ಕೀಡಾಗಿತ್ತು. ಬಳಿಕ ಆಯೋಜಕರು ಟ್ರೋಫಿ ಹಾಗೂ ಬಹುಮಾನ ಮೊತ್ತದ 20 ಲಕ್ಷ ರೂ. ಹಣವನ್ನು ಸೆಮಿ ಫೈನಲಿಗೆ ತೇರ್ಗಡೆಗೊಂಡಿದ್ದ ನಾಲ್ಕು ತಂಡಗಳಿಗೆ ಸಮನಾಗಿ ಹಂಚಿ ನಾಣ್ಯ ಚಿಮ್ಮುವಿಕೆ ಮೂಲಕ ಚಾಂಪಿಯನ್ ತಂಡವನ್ನು ಆಯ್ಕೆ ಮಾಡಿ ವಿವಾದ ಸುಖಾಂತ್ಯಗೊಳಿಸಿದ್ದರು.ತದನಂತರ ಆಯೋಜಕರು ಕಾನೂನಿನ ಮೊರೆ ಹೋಗಿ ಆರೋಪಿಗಳ ವಿರುದ್ಧ ಸಮರ ಸಾರಿದ್ದು, ಇದೀಗ ಉಡುಪಿ ಜಿಲ್ಲಾ ನ್ಯಾಯಾಲಯ ಪೊಲೀಸ್ ಇಲಾಖೆಗೆ ತನಿಖೆಗೆ ಆದೇಶ ನೀಡಿ ತೀರ್ಪು ನೀಡಿದೆ.
ಆಯೋಜಕರು ಈ ಪ್ರಕರಣವನ್ನು ಕಾನೂನಿನ ಮುಖಾಂತರ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಬರೋಬ್ಬರಿ ಒಂದೂವರೆ ಕೋಟಿ ರೂ.ಗಳಷ್ಟು ವೆಚ್ಚ ಭರಿಸಿ ಟೂರ್ನಮೆಂಟ್ ಆಯೋಜಿಸಿ ಬ್ರಹ್ಮಾವರಕ್ಕೆ ಹೆಸರು ತಂದಿದ್ದ ಎಚ್ಎಂಸಿ ಯುನೈಟೆಡ್ ಟ್ರೋಫಿ ಪಂದ್ಯಾವಳಿಯಲ್ಲಿ ಸೆಮಿ ಫೈನಲ್
ಪಂದ್ಯಾಟದ ಕೊನೆಯ ದಿನವಾದ ಜ.25ರಂದು ಜಾನ್ಸನ್ ಕುಂದಾಪುರ ಹಾಗೂ ಪಾಂಚಜನ್ಯ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ವಿವಾದ ಉಂಟಾಗಿ ಗೊಂದಲ ಸೃಷ್ಟಿಯಾಯಿತು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಿದ್ದ ಕಾರಣ ಸಂಘಟಕರು ಪಂದ್ಯಾಟ ರದ್ದುಗೊಳಿಸಿದ್ದರು. ಆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ- ವಿರೋಧ ಚರ್ಚೆ ನಡೆದಿತ್ತು.
ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ, ವಿವಾದಕ್ಕೆ ಕಾರಣವಾಗಿದ್ದ ಜಾನ್ಸನ್ ಕುಂದಾಪುರ ತಂಡವನ್ನು ಕೈಬಿಟ್ಟು, ಖುಷಿ ಅಮರ್ ಪಾಂಚಜನ್ಯ ತಂಡವನ್ನು ಸೆಮಿಫೈನಲ್ ಪ್ರವೇಶಿಸಿದ ತಂಡ ಎಂದು ಘೋಷಿಸಿ, ಸೆಮಿಫೈನಲ್‌ಗೆ ಅರ್ಹತೆ ಪಡೆದ ಜಯಕರ್ನಾಟಕ ಬೆಂಗಳೂರು, ಫ್ರೆಂಡ್ಸ್ ಬೆಂಗಳೂರು, ಇಝಾನ್ ಚೈತನ್ಯ, ಎಚ್.ಎಂ ಏಕ್ತಾ ಮತ್ತು ಖುಷಿ ಅಮರ್ ಪಾಂಚಜನ್ಯ ತಂಡಗಳ ನಡುವೆ ಅದೃಷ್ಟದ ಆಯ್ಕೆ ನಡೆಸಲಾಗಿತ್ತು.
ಇದೀಗ ಸಂಘಟಕರು ಟೂರ್ನಮೆಂಟಿಗೆ ಅಡಚಣೆ ಉಂಟು ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವುದು ಸ್ವಾಗತಾರ್ಹಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತಿದೆ.