ಲೋಕಬಂಧು ನ್ಯೂಸ್ ಉಡುಪಿ, ಏ.29
ಬೇಸಗೆ ಕಲಾ ಶಿಬಿರಗಳು ಮಕ್ಕಳ ರಚನಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ನಿರ್ದೇಶಕ ವಿದ್ಯಾವಂತ ಆಚಾರ್ಯ ಹೇಳಿದರು.ಇಂದ್ರಾಳಿ ಕಲಾ ತಪಸ್ ಸಂಗೀತ ಪಾಠಶಾಲೆ ಮಕ್ಕಳಿಗಾಗಿ ಆಯೋಜಿಸಿದ ಹತ್ತು ದಿನಗಳವಧಿಯ ಕಲಾ ಕೌಶಲ್ಯ ಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಪ್ರತಿಯೊಬ್ಬರೂ ಜ್ಞಾನ, ಪ್ರತಿಭೆ ಮತ್ತು ಕಲಾ ಕೌಶಲ ಹೊಂದಲು ಶಾರದಾಮಾತೆಯೇ ಪ್ರೇರಣೆ. ಆಕೆಯ ಪ್ರತಿಯೊಂದು ಮುದ್ರೆಯೂ ಅಸಂಖ್ಯಾತ ಸೂಕ್ಷ್ಮತೆಯನ್ನು ಹೊಂದಿದೆ. ಮಕ್ಕಳು ಶಾರದಾ ಮಾತೆಯನ್ನು ಅನುಸರಿಸಿ ತಮ್ಮ ಅಂತರಂಗವನ್ನು ಅರಿತು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ರೋಟರಿ ಜಿಲ್ಲಾ 3182ರ ಜಿಲ್ಲಾ ಮಾಜಿ ಗವರ್ನರ್ ಬಿ.ರಾಜಾರಾಮ ಭಟ್ 'ಕಲಾಕೌಶಲ್ಯ' ಶಿಬಿರದ ಮಾಹಿತಿ ಕೋಶ ಅನಾವರಣಗೊಳಿಸಿ, ಮಕ್ಕಳು ವಿದ್ಯೆಯ ಜೊತೆಗೆ ವಿವಿಧ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಮಾನಸಿಕ ದೃಢತೆ ಸಾಧಿಸಿ ಸರ್ವತೋಮುಖ ವ್ಯಕ್ತಿತ್ವ ರೂಪಿಸಿಸಿಕೊಳ್ಳಬಹುದು ಎಂದರು.
ಅತಿಥಿಯಾಗಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್ ಕುರ್ಯ ಕ್ರೀಡೆ, ಕಲೆ ಮತ್ತು ವಿದ್ಯೆಯನ್ನು ಸಮಾನವಾಗಿ ಕಲಿತಾಗ ಮಾನಸಿಕವಾಗಿ ಸದೃಢನಾಗಿಯೂ, ದೈಹಿಕವಾಗಿ ಬಲಾಢ್ಯನಾಗಿಯೂ, ಶೈಕ್ಷಣಿಕವಾಗಿ ಅತ್ಯುನ್ನತ ಸ್ಥಾನ ತಲುಪಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಉಡುಪಿ ಅಧ್ಯಕ್ಷ ಸೂರಜ್ ಕುಮಾರ್, ಕಲಾ ತಪಸ್ ಸಂಗೀತ ಶಾಲೆಯ ವಿವಿಧ ತರಬೇತಿ ಕಾರ್ಯಾಗಾರಗಳು, ಕಲಾ ಶಿಬಿರಗಳು ಎಳೆಯ ಮನಸ್ಸುಗಳನ್ನು ಕಲಾತ್ಮಕವಾಗಿ ಅರಳಿಸುವಲ್ಲಿ ಸಹಕಾರಿಯಾಗಲಿ ಎಂದು ಆಶಿಸಿದರು.
ಕಲಾ ತಪಸ್ ಸಂಸ್ಥೆ ಪೋಷಕ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿ, ವಂದಿಸಿದರು. ನಿರ್ದೇಶಕಿ ಶ್ರಾವ್ಯಾ ಎಸ್. ಬಾಸ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಸಂಯೋಜನಾಧಿಕಾರಿ ಶ್ರವಣ ಎಸ್. ಬಾಸ್ರಿ ನಿರೂಪಿಸಿದರು