ಖರ್ಗೆ ವಿರುದ್ಧ ಕ್ರಮಕ್ಕೆ ಆಗ್ರಹ

ಲೋಕಬಂಧು ನ್ಯೂಸ್ ಉಡುಪಿ, ಏ.29
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು `ಭಯೋತ್ಪಾದಕ' ಎಂದು ಕರೆದು ಅವಮಾನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಖರ್ಗೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.ಪ್ರಧಾನಿ ಹುದ್ದೆ ಹಾಗೂ ದೇಶದ 140 ಕೋಟಿ ಜನರ ಭಾವನೆಗಳಿಗೆ ಖರ್ಗೆ ಘೋರ ಅವಮಾನ ಮಾಡಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷ ಇಂಥ ಅಸಾಂವಿಧಾನಿಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದೆ. ಇಂಥ ಪ್ರಚೋದನಕಾರಿ ಮಾತುಗಳು ಸಮಾಜದಲ್ಲಿ ಸೌಹಾರ್ದತೆ ಕೆಡಿಸಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿವೆ. ಸಂವಿಧಾನಕ್ಕೆ ಗೌರವ ಕೊಡುವ ಯಾರು ಕೂಡಾ ಇಂಥ ಪದ ಬಳಕೆಯನ್ನು ಸಹಿಸುವುದಿಲ್ಲ. ದ್ವೇಷ ರಾಜಕಾರಣ ನಿಲ್ಲಬೇಕು ಮತ್ತು ಕಾಂಗ್ರೆಸ್ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಆಗ್ರಹಿಸಿದರು.


ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠಲ ಪೂಜಾರಿ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾಗೂ ಉಡುಪಿ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ವಿಜಯ ಕೊಡವೂರು, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ವರಂಗ ಮತ್ತು ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ ಮೊದಲಾದವರಿದ್ದರು.