ಪ್ರವಾಸೋದ್ಯಮ ಪ್ರಚಾರಕ್ಕೆ ಡಿಜಿಟಲ್ ಸ್ಪರ್ಷ

ಲೋಕಬಂಧು ನ್ಯೂಸ್ | ಉಡುಪಿ, ಏ.10
ಒನ್ ಟ್ಯಾಕ್, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್ ಮತ್ತು ಉಡುಪಿ ಟೂರಿಸಂ ಸಹಭಾಗಿತ್ವದಲ್ಲಿ ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಎಲ್ಲ ಸಕ್ರಿಯ ಪಾಲುದಾರರ ಜೊತೆ ವಿಶೇಷ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿಯ ಸಂಸ್ಕೃತಿ, ಪರಂಪರೆ, ಆಹಾರ ಶೈಲಿ ಮತ್ತು ಧಾರ್ಮಿಕತೆ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲು ಉದ್ದೇಶಿಸಲಾಗಿದ್ದು ಅದಕ್ಕೆ ಡಿಜಿಟಲ್ ಸ್ಪರ್ಷ ನೀಡಲಾಗುವುದು ಎಂದರು.


ಕ್ರಿಯೇಟರ್ಸ್ ಲ್ಯಾಬ್ ಉಡುಪಿ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಡಿಜಿಟಲ್ ಕಂಟೆಂಟ್'ಗಳನ್ನು ತಯಾರಿಸುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ಸ್ ಭಾಗವಹಿಸಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಅವಕಾಶ ಇದೆ. ವಿಶೇಷವಾಗಿ ಕಾಲೇಜು ಮಟ್ಟದಲ್ಲಿ ಲ್ಯಾಬ್'ಗಳನ್ನು ಅಳವಡಿಸಿ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದರು.


ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಬಗ್ಗೆ ಅತ್ಯಪೂರ್ವ ಕಥಾವಸ್ತು, ಸಾಂಸ್ಕೃತಿಕ ಸಾಕ್ಷ್ಯಚಿತ್ರ, ಫೋಟೊಗಳು ಅಥವಾ ವೀಡಿಯೊಗಳನ್ನು ತಯಾರಿಸಿ ಹಂಚಿಕೊಳ್ಳಬಹುದು. ಅತ್ಯುತ್ತಮ ಗುಣಮಟ್ಟದ ಕಂಟೆಂಟ್'ಗಳಿಗೆ ಬೆಸ್ಟ್ ವೀಡಿಯೊ, ಫೋಟೊ ಮೆಮೊಯಿರ್ ಮತ್ತು ಬೆಸ್ಟ್ ಸ್ಟೋರಿ ವಿಭಾಗದಲ್ಲಿ ಪ್ರತೀ ತಿಂಗಳು ಪ್ರಶಸ್ತಿ ನೀಡುವ ಜೊತೆ ಸ್ಟೋರಿ ಆಫ್ ದ ಇಯರ್, ಎಮಜಿರ್ಂಗ್ ಸ್ಟೋರಿ ಟೆಲ್ಲರ್ ಹಾಗೂ ಕಲ್ಚರಲ್ ಡಾಕ್ಯುಮೆಂಟೇಶನ್ ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.


ಮೊದಲಿಗೆ ಒಂದು ಕಾಲೇಜಿನಲ್ಲಿ ಕ್ರಿಯೇಟರ್ಸ್ ಲ್ಯಾಬ್ ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಇತರ ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದರು.


ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇಲ್ಲಿನ ಬೀಚ್'ಗಳಲ್ಲಿ ಜಲಕ್ರೀಡೆ, ಆಯುರ್ವೇದ ಪ್ರವಾಸೋದ್ಯಮ, ಸ್ಥಳೀಯ ಆಹಾರ ಪದ್ಧತಿ, ಪ್ರಾಕೃತಿಕ ಸ್ಥಳಗಳು, ಧಾರ್ಮಿಕ ಸ್ಥಳಗಳ ಬಗ್ಗೆ ವಿದೇಶಿಯರಿಗೆ ಹೆಚ್ಚು ಪ್ರಚಾರ ನೀಡುವ ಅಗತ್ಯವಿದೆ. ಆಯುರ್ವೇದ ಪ್ರವಾಸೋದ್ಯಮಕ್ಕೆ ಒತ್ತುನೀಡಲು ತರಬೇತಿ ಆಯೋಜಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಮಾಹಿತಿ ನೀಡಲು ನುರಿತ ಗೈಡ್'ಗಳನ್ನು ನಿಯೋಜಿಸುವ ಕುರಿತು ಯೋಜಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ವಿಂಧ್ಯಾ, ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಡಾ.ತನ್ಮಯ್ ಗೋಸ್ವಾಮಿ, ಮಾಹೆ ಎಂಐಸಿ ನಿರ್ದೇಶಕಿ ಶುಭಾ ಎಚ್.ಎಸ್. ಮೊದಲಾದವರಿದ್ದರು.