ಲೋಕಬಂಧು ನ್ಯೂಸ್ ಉಡುಪಿ, ಏ.23
ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಯಕ್ಷಗಾನ ಸಂಶೋಧಕ, ಪ್ರಸಂಗಕರ್ತ ಹಾಗೂ ಭಾಗವತ ಡಾ.ಕೆ.ಎಂ.ರಾಘವ ನಂಬಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಗುರುವಾರ ಪ್ರಕಟಿಸಿದರು.ಪ್ರಶಸ್ತಿಯೊಂದಿಗೆ ಒಂದು ಲಕ್ಷ ರೂ.ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ ನೀಡಲಾಗುವುದು.
ಇದೇ ಸಂದರ್ಭದಲ್ಲಿ 2025ನೇ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಮೇ 3ರಂದು ಸಂಜೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದವರು ವಿವರಿಸಿದರು.
ರಾಘವ ನಂಬಿಯಾರ್
ಯಕ್ಷಗಾನ ಅದರಲ್ಲೂ ವಿಶೇಷವಾಗಿ ತೆಂಕುತಿಟ್ಟು ಯಕ್ಷಗಾನದ ಕುರಿತಂತೆ ಆಳವಾದ ಅಧ್ಯಯನ ನಡೆಸಿರುವ ರಾಘವ ನಂಬಿಯಾರ್ ಅವರು ಶ್ರೀಕಂಠ ಪಂಡಿತ ಹಾಗೂ ಪಾರ್ವತಿ ಅಮ್ಮ ಅವರ ಪುತ್ರರಾಗಿ 1946ರಲ್ಲಿ ಜನಿಸಿದ್ದರು. ನೀರೆಬೈಲೂರು ಪ್ರಾಥಮಿಕ ಶಾಲೆ, ಕಾರ್ಕಳದ ಶ್ರೀ ಭುವನೇಂದ್ರ ಓರಿಯಂಟಲ್ ಹೈಸ್ಕೂಲ್‌ಗಳಲ್ಲಿ ಆರಂಭಿಕ ಶಿಕ್ಷಣ ಪಡೆದು ಮೈಸೂರು ವಿ.ವಿ.ಯಿಂದ ಸಂಸ್ಕೃತ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.
'ಕರಾವಳಿ ಯಕ್ಷಗಾನ ಹಿಮ್ಮೇಳ: ಒಂದು ಸಮಗ್ರ ಅಧ್ಯಯನ' ಮಹಾಪ್ರಬಂಧಕ್ಕೆ 2004ರಲ್ಲಿ ಮಂಗಳೂರು ವಿ.ವಿ.ಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ನಂಬಿಯಾರ್ ಬರೆದ ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ಅಮರೇಂದ್ರಪದ ವಿಜಯ, ವಜ್ರಧರ ವಿಲಾಸ, ರಘುವಂಶ ಇತ್ಯಾದಿ ಯಕ್ಷಗಾನ ಪ್ರಸಂಗಗಳು ತೆಂಕುತಿಟ್ಟಿನಲ್ಲಿ ಯಶಸ್ಸು ಕಂಡಿವೆ.
1964ರಿಂದ ಯಕ್ಷಗಾನ ರಂಗದ ನಿಕಟ ಸಂಪರ್ಕ ಹೊಂದಿರುವ ರಾಘವ ನಂಬಿಯಾರ್ ಯಕ್ಷಗಾನ ಆಟಗಳಲ್ಲಿ ಆಸಕ್ತಿ ತಾಳಿ ತಾಳಮದ್ದಳೆಯಲ್ಲಿ ಅರ್ಥಗಾರಿಕೆ, ಹಾಡುಗಾರಿಕೆ, ಹಿಮ್ಮೇಳ ವಾದನ, ವೇಷಗಾರಿಕೆ ಮೂಲಕ ರಂಗದ ಸಮಗ್ರ ಅನುಭವ ಪಡೆದರು.