ಏರ್ ಕಂಡೀಷನರ್ ಅಸಮರ್ಪಕ ಬಳಕೆಯಿಂದ ವಿದ್ಯುತ್ ವೆಚ್ಚ ಹೆಚ್ಚಳ

ಲೋಕಬಂಧು ನ್ಯೂಸ್ ಉಡುಪಿ, ಏ.29
ವಾತಾವರಣದ ಉಷ್ಣಾಂಶದ ತೀವ್ರ ಏರಿಕೆ ಹಿನ್ನೆಲೆಯಲ್ಲಿ ಮನೆ, ಕಚೇರಿ, ವಾಣಿಜ್ಯ ಸಂಸ್ಥೆ ಇತ್ಯಾದಿಗಳಲ್ಲಿ ಏರ್ ಕಂಡೀಷನರ್ (ಏ.ಸಿ.) ಅಳವಡಿಕೆ ಮತ್ತು ಬಳಕೆ ಹೆಚ್ಚುತ್ತಿದೆ. ಏಸಿ ಆರೋಗ್ಯ ಚೆನ್ನಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕ. ಏರ್ ಕಂಡೀಷನರ್ ವ್ಯವಸ್ಥೆಯ ಸಮರ್ಪಕ ಬಳಕೆ, ಸೂಕ್ತ ನಿರ್ವಹಣೆ ಮಾಡದಿದ್ದಲ್ಲಿ ವಿದ್ಯುತ್ ವೆಚ್ಚ ಹೆಚ್ಚಳದ ಜೊತೆಗೆ ಏಸಿ ಕಾರ್ಯಕ್ಷಮತೆ ಕುಸಿದು ಅವಸರದ ದುರಸ್ತಿ ವೆಚ್ಚಗಳಿಗೆ ಹಾದಿಯಾಗುತ್ತದೆ ಎಂದು ಮೋಲ್ಟೋಕೇರ್ ಪ್ರಾಪರ್ಟಿ ಸರ್ವೀಸ್‌ ನಿರ್ದೇಶಕ ಕೃಷ್ಣರಾಜ ತಂತ್ರಿ ಹೇಳಿದರು.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಬ್ರಹ್ಮಗಿರಿಯ ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ 'ಏರ್ ಕಂಡೀಷನರ್ ಕಾರ್ಯನಿರ್ವಹಣೆ: ಮಾಹಿತಿ, ಪ್ರಾತ್ಯಕ್ಷಿಕೆ' ಕಾರ್ಯಕ್ರಮದಲ್ಲಿ ಮಾತನಾಡಿದರು.ಏರ್ ಕಂಡೀಷನರ್‌ಗಳು 24ರಿಂದ 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರ್ಯ ನಿರ್ವಹಿಸಿದರೆ ವಿದ್ಯುತ್ ಬಳಕೆ ನಿಯಂತ್ರಣ ಸಾಧ್ಯವಾಗುತ್ತದೆ ಮತ್ತು ಅನಗತ್ಯ ಒತ್ತಡ ತಪ್ಪಿಸಬಹುದು.


ಏಸಿ ಕೋಣೆಯಲ್ಲಿರುವ ಗಾಳಿಯನ್ನು ಶುದ್ಧಗೊಳಿಸಿ ತಂಪು ಮಾಡುತ್ತದೆಯೇ ಹೊರತು ಹೊರಗಿನ ಗಾಳಿಯನ್ನು ಒಳಗಡೆ ತೆಗೆದುಕೊಳ್ಳುವುದಿಲ್ಲ. ಏಸಿಯ ಇಂಡೋರ್ ಮತ್ತು ಔಟ್ ಡೋರ್ ಯುನಿಟ್‌ಗಳಿಗೆ 10 ಅಡಿಗಳ ಅಂತರ ಅಗತ್ಯವಾಗಿ ಇರಬೇಕು. ಇಲ್ಲದಿದ್ದರೆ ಅದು ಹೆಚ್ಚು ಕೂಲ್ ಆಗುವುದಿಲ್ಲ ಎಂದರು.


ಏಸಿ ಸ್ಪೋಟಗೊಳ್ಳದು
ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ. ಅದರಲ್ಲಿರುವ ಗ್ಯಾಸ್‌ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯುವುದಿಲ್ಲ ಎಂದರು.


ಕರಾವಳಿಯಲ್ಲಿ ಏರ್ ಕಂಡೀಷನರ್‌ಗಳು ಕೇವಲ 10 ವರ್ಷ ಬಾಳಿಕೆ ಬರುತ್ತವೆ. ಮಳೆಗಾಲದಲ್ಲಿ ಏರ್ ಕಂಡೀಷನರ್ (26ರಿಂದ 28 ಡಿಗ್ರಿ ಸೆಲ್ಸಿಯಸ್) ಬಳಸಬಹುದು. ಏರ್ ಕಂಡೀಷನರ್ ಇಂಡೋರ್‌ನಷ್ಟೇ ಔಟ್ ಡೋರ್'ಗೂ ಗಮನ ಅಗತ್ಯ ಎಂದು ತಂತ್ರಿ ತಿಳಿಸಿದರು.


ಕರಾವಳಿಗೆ ಕೂಲರ್‌ಗಿಂತ ಏಸಿ ಸೂಕ್ತ
ಸಮುದ್ರದಿಂದಾಗಿ ಕರಾವಳಿ ಪ್ರದೇಶದ ವಾತಾವರಣದಲ್ಲಿ ತೇವಾಂಶ (ಹ್ಯುಮಿಡಿಟಿ) ಹೆಚ್ಚು ಇರುತ್ತದೆ. ಆದ್ದರಿಂದ ಇಲ್ಲಿನ ವಾತಾವರಣಕ್ಕೆ ಏರ್ ಕೂಲರ್‌ಗಿಂತ ಏರ್ ಕಂಡೀಷನರ್ ಅತೀ ಸೂಕ್ತ ಎಂದು ಕೃಷ್ಣರಾಜ ತಂತ್ರಿ ತಿಳಿಸಿದರು.


ವಾತಾವರಣದಲ್ಲಿ ಸಾಮಾನ್ಯವಾಗಿ ಶೇ.40-60ರಷ್ಟು ತೇವಾಂಶ ಇರಬೇಕು. ಶೇ.60ಕ್ಕಿಂತ ಜಾಸ್ತಿ ಇದ್ದರೆ ದೇಹದಲ್ಲಿ ಹೆಚ್ಚು ಬೆವರು ಬರುತ್ತದೆ. ಶೇ.40ಕ್ಕಿಂತ ಕಡಿಮೆ ಇದ್ದರೆ ದೇಹ ಒಣಗಿ ಹೋಗುತ್ತದೆ. ಕರಾವಳಿಯಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಬೆವರು ಹೆಚ್ಚಾಗಿರುತ್ತದೆ. ಏರ್ ಕಂಡೀಷನರ್ ಕೋಣೆಯಲ್ಲಿರುವ ತೇವಾಂಶವನ್ನು ಹೊರಗೆ ಹಾಕಿ ಒಳಗೆ ತಂಪಿನ ವಾತಾವರಣ ಸೃಷ್ಟಿಸುತ್ತದೆ. ಕೂಲರ್ ಹೊರಗಡೆ ಗಾಳಿಯಲ್ಲಿರುವ ತೇವಾಂಶವನ್ನು ಒಳಗೆ ತರುತ್ತದೆ. ಆದ್ದರಿಂದ ತೇವಾಂಶ ಜಾಸ್ತಿ ಇರುವ ಕರಾವಳಿಗೆ ಏರ್ ಕಂಡೀಷನರ್ ಹೆಚ್ಚು ಸೂಕ್ತ ಎಂದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು.


ಮೋಲ್ಟೋಕೇರ್ ಸಂಸ್ಥೆಯ ಪ್ರಶಾಂತ್, ಗಣೇಶ್ ಮತ್ತು ಶರತ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಮಿತಾ ಸಹಕರಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.