ಲೋಕಬಂಧು ನ್ಯೂಸ್ ಉಡುಪಿ, ಏ.29
ಉಡುಪಿ ಜಿಲ್ಲೆ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಜಿಲ್ಲೆಯ ಅಗ್ನಿಶಾಮಕ ದಳದ ವೈಫಲ್ಯವೇ ಸಾಕ್ಷಿ ಎಂದು ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ವಾರ ಉಡುಪಿ ನಗರದ ಹೃದಯ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕೇವಲ 2 ಕಿ.ಮೀ. ದೂರದ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು 45 ನಿಮಿಷ ತೆಗೆದುಕೊಳ್ಳುವ ಮೂಲಕ ಅಗ್ನಿಶಾಮಕ ದಳದ ತುರ್ತು ಕಾರ್ಯಾಚರಣೆಯ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉಡುಪಿ ನಗರದ ಅಗ್ನಿಶಾಮಕ ದಳಕ್ಕೆ ಹೆಚ್ಚುವರಿ ವಾಹನ ಹಾಗೂ ಖಾಲಿ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಈವರೆಗೂ ಪೂರಕವಾಗಿ ಸ್ಪಂದಿಸಿಲ್ಲ.
ಉಡುಪಿ ಜಿಲ್ಲೆಯಾಗಿ 28 ವರ್ಷ ಕಳೆದರೂ ತುರ್ತು ಕಾರ್ಯಾಚರಣೆ ಸಂದರ್ಭದಲ್ಲಿ ನೆರೆಯ ಜಿಲ್ಲೆಯನ್ನು ಅವಲಂಬಿಸುವ ಸನ್ನಿವೇಶ ನಿರ್ಮಾಣವಾಗಿರುವುದು ದುರದೃಷ್ಟಕರ.
ಮಣಿಪಾಲ ಹಾಗೂ ಬ್ರಹ್ಮಾವರ ಭಾಗಕ್ಕೆ ಅಗ್ನಿಶಾಮಕ ದಳದ ಬೇಡಿಕೆಗೆ ಇದೀಗ ಮಂಜೂರು ನೀಡಿದ್ದರೂ, ಬ್ರಹ್ಮಾವರ ಅಗ್ನಿಶಾಮಕ ದಳ ಘಟಕಕ್ಕೆ ಇನ್ನೂ ಅನುದಾನ ಮಂಜೂರಾಗಿಲ್ಲ. ಅಗ್ನಿಶಾಮಕ ದಳದಲ್ಲಿ 15 ವರ್ಷ ಹಳೆಯದಾದ ವಾಹನಗಳು ಸೇವೆಗೆ ಲಭ್ಯವಾಗದ ಕಾರಣ ಹೊಸ ವಾಹನಗಳ ಮಂಜೂರಾತಿಗೂ ಮೀನ-ಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಅಗ್ನಿ ಅವಘಡದಿಂದ ಕೋಟ್ಯಾಂತರ ರೂ. ನಷ್ಟ ಅನುಭವಿಸಿದ ಅಂಗಡಿ ಮಾಲೀಕರಿಗೆ ತಕ್ಷಣ ಗರಿಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿರುವ ಶಾಸಕ ಯಶಪಾಲ್ ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಉಡುಪಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಗ್ನಿಶಾಮಕ ದಳ ಅತ್ಯಂತ ಅಗತ್ಯವಾಗಿದ್ದು ರಾಜ್ಯ ಸರ್ಕಾರ ಇನ್ನಾದರೂ ಉಡುಪಿ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಬಿಟ್ಟು ಕೇವಲ ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಳ್ಳದೆ ಅಗ್ನಿಶಾಮಕ ದಳದಂಥ ಅತ್ಯಗತ್ಯ ತುರ್ತು ಸೇವೆಗಳ ಬಗ್ಗೆ ವಿಶೇಷ ಆದ್ಯತೆ ನೀಡಿ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.