ಲೋಕಬಂಧು ನ್ಯೂಸ್ ಉಡುಪಿ, ಏ.29
ಆಧುನಿಕತೆಯಿಂದಾಗಿ ಇಂದು ಮೀನುಗಾರಿಕೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕೆ ವೃತ್ತಿಗೆ ನಾವು ಶಕ್ತಿ ಕೊಟ್ಟರೆ ಅವರ ಶ್ರಮದಿಂದ ಆರ್ಥಿಕ ಬಲ ಮಾತ್ರವಲ್ಲದೇ ಆಹಾರ ಭದ್ರತೆಯೂ ಲಭಿಸುತ್ತದೆ ಎಂದು ಮನಗಂಡಿದ್ದಾರೆ. ಆ ನಿಟ್ಟಿನಲ್ಲಿ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ಕೊಡುತ್ತಿದ್ದು ಅದು ಇನ್ನಷ್ಟು ಸಮೃದ್ಧವಾಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಮಲ್ಪೆ ಬೀಚ್'ನಲ್ಲಿ ನಡೆದ ಪರ್ಸೀನ್ ಮೀನುಗಾರರ ಸಂಘದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮೊದಲು ಕರ್ನಾಟಕದಲ್ಲಿ 4 ಲಕ್ಷ ಟನ್ ಮೀನು ಉತ್ಪಾದನೆಯಾಗುತ್ತಿತ್ತು. ಮತ್ಸ್ಯ ಸಂಪದ ಯೋಜನೆಯ ಪರಿಣಾಮ ಇಂದು 9 ಲಕ್ಷ ಟನ್ ಮೀನು ಉತ್ಪಾದನೆಯಾಗುತ್ತಿದೆ. ಹವಾಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದಾಗಿ ಮೀನು ಮರಿ ನಾಶವಾಗುತ್ತಿದೆ ಎಂಬ ಅಪಾಯದ ಗಂಟೆ ಎದುರಾಗಿದೆ. ಹಾಗಾಗಿ ಮತ್ಸ್ಯ ಸಂಪತ್ತು ಉಳಿಸುವ ವ್ಯವಸ್ಥೆಯೂ ಆಗಬೇಕಿದೆ ಎಂದರು.
ನಾನು ಮೀನುಗಾರಿಕೆ ಸಚಿವನಾಗಿದ್ದಾಗ ಹೆಜಮಾಡಿ ಬಂದರಿಗೆ 180 ಕೋಟಿ ರೂ. ಮಂಜೂರು ಮಾಡಿದ್ದು, ಶೇ.90ರಷ್ಟು ಕಾಮಗಾರಿ ಆಗಿದೆ. ಅದು ಪೂರ್ಣಗೊಂಡರೆ ಮಲ್ಪೆ ಬಂದರಿನ ಒತ್ತಡ ಕಡಿಮೆ ಆಗುತ್ತದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ವ್ಯಕ್ತಿಯ ಹಿತದೊಂದಿಗೆ ಸಮಷ್ಟಿ ಹಿತವೂ ಜೊತೆಯಾಗಬೇಕು. ಮೀನುಗಾರ ಸಮುದಾಯದವರು ನೇರ ನಡೆ-ನುಡಿಯವರು. ಮೀನುಗಾರಿಕೆಗೆ ಇನ್ನಷ್ಟು ಶಕ್ತಿ ಬರಬೇಕು. ಮೀನುಗಾರರ ಆತ್ಮವಿಶ್ವಾಸ ಹೆಚ್ಚಾಗಬೇಕು ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಕರ್ನಾಟಕದ ಆಯ್ದ ತಂಡಗಳ ಗುಂಪು ನೃತ್ಯ ಸ್ಪರ್ಧೆ ಕರಾವಳಿ ನೃತ್ಯೋತ್ಸವ ನಡೆಯಿತು.
ಇದೇ ವೇಳೆ ರಜತ ಸಂಭ್ರಮದ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರೀಡೋತ್ಸವದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮುಳುಗು ತಜ್ಞರಾದ ಈಶ್ವರ್ ಮಲ್ಪೆ ಮತ್ತುಕ ರವಿ ಅಂಚನ್, ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದ ಕೇಶವ್, ಮೀನುಗಾರ ಮುಖಂಡರಾದ ವಾಸು ಕಾಂಚನ್ ಮತ್ತು ಗೋಪಾಲ್ ಮೊಗೇರ ಭಟ್ಕಳ ಅವರನ್ನು ಸನ್ಮಾನಿಸಲಾಯಿತು.
ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ರಜತ ಸಂಭ್ರಮ ಸಮಿತಿ ಉಪಾಧ್ಯಕ್ಷ ಆನಂದ್ ಬಿ. ಸುವರ್ಣ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಪ್ರಮುಖರಾದ ಎಂ.ಕೆ. ಬಾಲರಾಜ್, ಗೋಪಾಲ್ ಸಿ. ಬಂಗೇರ, ರತ್ನಾಕರ ಸಾಲಿಯಾನ್, ನಾಗರಾಜ ಬಿ. ಕುಂದರ್, ಕೃಷ್ಣಕುಮಾರ್ ಬಂಗೇರ, ಹರಿಶ್ಚಂದ್ರ ಕಾಂಚನ್, ರಮೇಶ್ ಮೆಂಡನ್, ಸುಭಾಷ್ ಮೆಂಡನ್, ರವಿರಾಜ್ ಸುವರ್ಣ, ಕೃಷ್ಣ ಜಿ. ಕೋಟ್ಯಾನ್, ಕರುಣಾಕರ ಸಾಲ್ಯಾನ್, ಜಯಕರ್ ವಿ. ಸುವರ್ಣ, ಶಿವಪ್ಪ ಟಿ. ಕಾಂಚನ್, ಪ್ರದೀಪ್, ವಿನಯ್ ಕರ್ಕೇರ ಮೊದಲಾದವರಿದ್ದರು.
ಗಾರ್ಗಿ ಬಿ. ಸುವರ್ಣ ಪ್ರಾರ್ಥಿಸಿದರು. ರಜತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಸ್ವಾಗತಿಸಿದರು.