ಲೋಕಬಂಧು ನ್ಯೂಸ್ | ಉಡುಪಿ, ಏ.7
ಮಾನಸಿಕ ಶಾಂತಿ ಇಲ್ಲದೆ ಹೋದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವೆಲ್ಲರೂ ಇರುವುದರಲ್ಲೇ ಆತ್ಮತೃಪ್ತಿ ಕಾಣಬೇಕು. ವ್ಯಗ್ರರಾಗಿ ಇರುವುದಕ್ಕಿಂತ ಶಾಂತಚಿತ್ತರಾಗಿ ದೇವರ ಕೃಪೆಗೆ ಪಾತ್ರರಾಗಬೇಕು. ಭಕ್ತಿ ಮಾರ್ಗವೊಂದೇ ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗ. ಭಗವಂತನ ಚಿಂತನೆ, ಆರಾಧನೆಯನ್ನು ಮಾಡುತ್ತಾ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.
ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿಯ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ನಡೆದ ಮೊಕ್ತೇಸರರ ಸಂಗಮದಲ್ಲಿ ಆಶೀರ್ವಚನ ನೀಡಿದರು.
ಪ್ರಾಣದೇವರ ಚಿತ್ತದಿಂದ ದುಷ್ಟ ಶಕ್ತಿಗಳು ನಿವಾರಣೆಯಾಗಿ ಕ್ಷೇತ್ರದ ಕೀರ್ತಿ ವೃದ್ಧಿಯಾಗಿ ಸುಕ್ಷೇತ್ರವಾಗಿ ಹೊರಹೊಮ್ಮುವ ಜೊತೆಗೆ ಭಕ್ತರಿಗೆ ಮಾನಸಿಕ ನೆಮ್ಮದಿ, ಆತ್ಮತೃಪ್ತಿಯನ್ನು ಕರುಣಿಸಿ ಸತ್ಕಾರ್ಯದ ಚಿಂತನೆಯನ್ನು ಕರುಣಿಸಲಿ ಎಂದು ಆಶಿಸಿದರು.
ಕಾಲಕಾಲಕ್ಕೆ ದೈವಸ್ಥಾನಗಳ ಜೀರ್ಣೋದ್ಧಾರ, ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿರಬೇಕು. ಅದರಿಂದ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ಕೊರಂಗ್ರಪಾಡಿ, ಹಿಂದೂಗಳಲ್ಲಿ ಸನಾತನ ಧರ್ಮದ ಪ್ರಜ್ಞೆ ಇರುವುದರಿಂದ ವಿಭಜನೆ ಮಾಡಲು ಯಾರಿದಿಂದಲೂ ಸಾಧ್ಯವಾಗಲಿಲ್ಲ. ದೇವಸ್ಥಾನಗಳ ಜೀರ್ಣೋದ್ಧಾರದಿಂದ ಬದುಕಿನ ಜೀರ್ಣೋದ್ಧಾರವಾಗುತ್ತದೆ. ದೇವಸ್ಥಾನಗಳು ಇರುವ ತನಕ ಶ್ರದ್ದೆ, ನಂಬಿಕೆ ಗಾಢವಾಗಿರುತ್ತದೆ ಎಂದರು.
ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಜಯ ರಾಘವ ರಾವ್, ಪಣಿಯಾಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಸಂಚಾಲಕ ನಾಗರಾಜ ಆಚಾರ್ಯ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಬನ್ನಂಜೆ, ಸಗ್ರಿ ಶ್ರೀ ಮಲೆಜುಮಾದಿ ದೈವಸ್ಥಾನದ ಜೀರ್ಣೋದ್ಧಾರ ಪುನಃಪ್ರತಿಷ್ಠೆ ಸಮಿತಿ ಅಧ್ಯಕ್ಷ ದೇವಿಚರಣ್ ಕಾವ, ಮಣಿಪಾಲ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಶ್ರೀನಿವಾಸ ಪೂಜಾರಿ, ಇಂದ್ರಾಳಿ ಶ್ರೀ ಮಹಿಷಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅನಂತ ನಾಯ್ಕ್, ಮಂಚಿ ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಯಾನಂದ ನಾಯ್ಕ, ಬುಡ್ನಾರು ಬ್ರಹ್ಮಬೈದರ್ಕಳ ಗರಡಿಯ ಗೋಪಾಲ ಪೂಜಾರಿ, ಕೊಡವೂರು ಸಾಯಿಬಾಬಾ ಮಂದಿರದ ದಿವಾಕರ ಶೆಟ್ಟಿ ತೋಟದಮನೆ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದಿನೇಶ್ ಶೆಟ್ಟಿ, ಪ್ರಸನ್ನ ಗಣಪತಿ ದೇವಸ್ಥಾನದ ಉಪಾಧ್ಯಕ್ಷ ಪಿ.ಜಿ. ಪಂಡಿತ್, ನರಸಿಂಗೆ ದೇವಸ್ಥಾನದ ಆನಂದ ನಾಯಕ್, ಪ್ರಮುಖರಾದ ಉಮೇಶ್ ಪೂಜಾರಿ, ಹೇಮನಾಥ ಹೆಗ್ಡೆ, ರಾಜೇಶ್ ನಾಯಕ್, ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ನಿರೂಪಿಸಿದರು.
