ಲೋಕಬಂಧು ನ್ಯೂಸ್ ಉಡುಪಿ, ಏ.29
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಬೆಂಗಳೂರಿನ ವೈದ್ಯ ಡಾ.ಲಕ್ಷ್ಮಣ ವಿ.ಎ. ಅವರ 'ಗೋಡೆಗೆ ನೇತುಬಿದ್ದ ಭೂಪಟ' ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.ಡಾ.ಲಕ್ಷ್ಮಣ ವಿ.ಎ. ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ.
ಓದು, ಕವನ, ಗದ್ಯ ಮತ್ತು ಅಂಕಣ ಬರಹಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಅನೇಕ ಕವನ ಸಂಕಲನ ಪ್ರಕಟಿಸಿದ್ದಾರೆ. 'ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ' ಅವರ ಪ್ರಥಮ ಕವನ ಸಂಕಲನ. 'ಅಪ್ಪನ ಅಂಗಿ', 'ಗರ್ದ್ ಗಮ್ಮತ್ತು', `ನೋಡಾ ಗೋಳಗುಮ್ಮಟ ನೋಡಾ', `ಮಿಲ್ಟ್ರಿ ಟ್ರಂಕು', 'ಕಾಯಿನ್ ಬೂತ್', 'ಪರಿಮಳದ ಬಾಕಿ ಮೊತ್ತ' ಇತ್ಯಾದಿ ಪ್ರಕಟಿತ ಕವನ ಸಂಕಲನಗಳು. 'ಬಂಡೆ ಬಸಪ್ಪನ ದೊಡ್ಡಿ' ಕಥೆ ಬೆಳಗಾವಿಯ ರಾಣಿ ಚೆನ್ನಮ್ಮ ಮಹಿಳಾ ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. 'ಬಸಣ್ಣನ ಸರ್ತಿ ಸೈಕಲ್ ಕಥೆ' ಮಂಗಳೂರು ವಿ.ವಿ., ಆಳ್ವಾಸ್ ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ.
ಕಣವಿ ಕಾವ್ಯ ಪ್ರಶಸ್ತಿ, ವೀಚಿ ಪ್ರಶಸ್ತಿ, ವಿಭಾ ಕಾವ್ಯ ಪ್ರಶಸ್ತಿ, ಅಡ್ವೈಜರ್ ಪ್ರಶಸ್ತಿ, ಸವದತ್ತಿ ಸಹೃದಯ ಕಾವ್ಯ ಪ್ರಶಸ್ತಿ, ಈ ಹೊತ್ತಿಗೆ ಕಾವ್ಯ ಪುರಸ್ಕಾರಗಳಲ್ಲದೆ ಹಲವಾರು ದತ್ತಿ ಬಹುಮಾನಗಳು ಲಭಿಸಿವೆ.
ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರಹ, ಕಥೆ, ಕವನ, ವೈಚಾರಿಕ ಬರಹ, ಪ್ರಬಂಧ ಬರಹ ಹಾಗೂ ಅನುಭವ ಕಥನಗಳು ಪ್ರಕಟವಾಗಿವೆ.
ಪಿ.ಎಚ್.ಸಿ ಕವಲುಗುಡ್ಡ ಅವರ ಇತ್ತೀಚಿನ ಕಾದಂಬರಿ, ಅಲ್ಲದೆ 'ನಸುಕು' ವೆಬ್‌ಸೈಟ್ ಸಂಪಾದಕರಾಗಿದ್ದಾರೆ.