ಆರ್.ಎಸ್.ಎಸ್ ಬಗ್ಗೆ ಖರ್ಗೆ ಕೀಳು ಮಾತು

ಲೋಕಬಂಧು ನ್ಯೂಸ್ | ಉಡುಪಿ, ಏ.10
ಹಿಂದೂ ಸಮಾಜಕ್ಕಾಗಿ ನ್ಯಾಯ ಕೇಳುವ ಸಂಘಟನೆ ಆರ್.ಎಸ್.ಎಸ್. ಸಂಘಟನೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿರುವ ಮಾತು ಸರಿಯಲ್ಲ. ಆರ್.ಎಸ್.ಎಸ್.ನ್ನು ವಿಷದ ಹಾವಿಗೆ ಹೋಲಿಸಿರುವುದು ಸಮಸ್ತ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಹಿರಿತನವನ್ನು ನಾವು ಗೌರವಿಸುತ್ತೇವೆ. ಆದರೆ, ಅವರು ಆಡಿರುವ ಮಾತು ಸರಿಯಲ್ಲ. ಆರ್‌ಎಸ್ಎಸ್ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಆರ್.ಎಸ್‌ಎಸ್.ನ್ನು ಕೊಲ್ಲಬೇಕು ಎಂದಿದ್ದಾರೆ. ಇಡೀ ಭಾರತದಲ್ಲಿ ಹಿಂದೂಗಳ ಪರ ಧ್ವನಿ ಎತ್ತಬಲ್ಲ ಸಂಘಟನೆ ಆರ್.ಎಸ್.ಎಸ್. ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ. ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆ. ರಾಷ್ಟ್ರೀಯತೆಯನ್ನು ಇಟ್ಟುಕೊಂಡ ಸಂಘಟನೆ ಆರ್.ಎಸ್.ಎಸ್ ಎಂದು ಕೋಟ ಬಣ್ಣಿಸಿದರು.


ಅಂಥ ಆರ್.ಎಸ್ಎಸ್.ನ್ನು ವಿಷದ ಹಾವಿಗೆ ಹೋಲಿಸಿ, ಕೊಲ್ಲಬೇಕು ಎಂದು ಖರ್ಗೆ ಹೇಳಿದ್ದಾರೆ. ಅದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಖರ್ಗೆಯವರಂಥ ಹಿರಿಯರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ. ಅವರ ಮಾತಿಗೆ ಪ್ರತಿಕ್ರಿಯೆ ಕೊಡಬಾರದು ಎಂದು ಯೋಚಿಸಿದ್ದೇನೆ ಎಂದರು.


ಬಿಜೆಪಿಗೇ ಗೆಲುವು
ಉಪಚುನಾವಣೆ ಕುರಿತು ಮಾತನಾಡಿದ ಸಂಸದ ಕೋಟ, ಬಿಜೆಪಿ ಈ ಬಾರಿ ಬಹು ದೊಡ್ಡ ಗೆಲುವು ಸಾಧಿಸಲಿದೆ. ಕೇರಳ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿ ಆಗಲಿದೆ. ಕರ್ನಾಟಕದ ಎರಡು ಕ್ಷೇತ್ರದ ಉಪಚುನಾವಣೆಯಲ್ಲೂ ಗೆಲುವು ಖಚಿತ. ಎರಡೂ ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ವಿರೋಧಿ ಅಲೆ ಇದೆ. ಕೇಂದ್ರ ಸರ್ಕಾರದ ಜನಪರ ಕೆಲಸವನ್ನು ಜನ ಬೆಂಬಲಿಸುತ್ತಾರೆ. ದೇಶದ ಸಮಗ್ರತೆ ಮತ್ತು ಭದ್ರತೆಗೆ ಮತ ಹಾಕುತ್ತಾರೆ. ಮೂರು ವರ್ಷದ ರಾಜ್ಯ ಆಡಳಿತದ ಅನಾಹುತಗಳನ್ನು ಜನ ಗಮನಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.