ಬಸವಣ್ಣನ ವಚನಗಳ ಸಂದೇಶ ಸಾರ್ವಕಾಲಿಕ

ಲೋಕಬಂಧು ನ್ಯೂಸ್ | ಉಡುಪಿ, ಏ.20
ವಿಶ್ವವೇ ಮೆಚ್ಚಿ ಆರಾಧಿಸುವ ಧೀಮಂತ ನಾಯಕ, ದಾರ್ಶನಿಕ, ಸಮಾಜ ಸುಧಾರಕ ಮತ್ತು ಲಿಂಗಾಯತ ಧರ್ಮದ ಸ್ಥಾಪಕ ಜಗಜ್ಯೋತಿ ಬಸವಣ್ಣನವರ ಆಚಾರ ವಿಚಾರಗಳು ಸಾರ್ವಕಾಲಿಕ. ಸಾಮಾಜಿಕ ನ್ಯಾಯ ಮತ್ತು ಜಾತಿ ತಾರತಮ್ಯ ಮುಕ್ತ ಸಮ-ಸಮಾಜದ ಸಂದೇಶಗಳನ್ನು ವಚನಗಳ ಮೂಲಕ ಸಾರಿದ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಉಡುಪಿ ಬಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಗರದ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬಸವಣ್ಣನವರನ್ನು ಕೇವಲ ಕನ್ನಡಿಗರು ಮತ್ತು ಭಾರತೀಯರು ಮಾತ್ರ ಪೂಜಿಸುವುದಿಲ್ಲ. ಅವರನ್ನು ವಿಶ್ವವೇ ಪೂಜಿಸುತ್ತದೆ. ಅವರೋರ್ವ ವಿಶ್ವಗುರು. ಇಂದು ಇಡೀ ವಿಶ್ವವೇ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುತ್ತಿದೆ. ಮೇಲು- ಕೀಳು, ಜಾತಿ- ಮತ- ಲಿಂಗಗಳ ಆಧಾರದಲ್ಲಿ ಸಮಾಜ ಒಡೆದಿದ್ದಾಗ ತಮ್ಮ ವಚನ ಸಾಹಿತ್ಯಗಳ ಮೂಲಕ ಲೋಕದ ಡೊಂಕನ್ನು ತಿದ್ದಿ ಸಮಾಜವನ್ನು ಒಗ್ಗೂಡಿಸಿದ ಮಹಾತ್ಮ.


12ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದು ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣ, ಮನುಜರೆಲ್ಲರೂ ಸದಾ ಕರ್ತವ್ಯ ನಿರತರಾಗಿರಬೇಕು ಎಂದು ಸಾರಿದ ಅವರ ಕಾಯಕವೇ ಕೈಲಾಸ ತತ್ವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.


ಪುತ್ಥಳಿ ಸ್ಥಾಪನೆ
ಜಗಮೆಚ್ಚಿ ಆರಾಧಿಸುವ ಧೀಮಂತ ನಾಯಕ, ದಾರ್ಶನಿಕ, ಸಮಾಜ ಸುಧಾರಕ ಮತ್ತು ಲಿಂಗಾಯತ ಧರ್ಮದ ಸ್ಥಾಪಕ ಜಗಜ್ಯೋತಿ ಬಸವಣ್ಣನವರ ಸಂದೇಶ ಸಾರ್ವಕಾಲಿಕ. ವಚನಗಳ ಮೂಲಕ ಅವರು ಸಾರಿದ ತತ್ವಾದರ್ಶಗಳನ್ನು ಯುವಜನತೆಗೆ ತಿಳಿಸಲು ಉಡುಪಿಯ ಪ್ರಮುಖ ಸ್ಥಳದಲ್ಲಿ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಲು ಬದ್ದ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.


ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಸವಣ್ಣ ಇವತ್ತಿಗೂ ಮಾನ್ಯರಾಗಿರಲು ಕಾರಣ ಅವರಲ್ಲಿದ್ದ ನಂಬಿಕೆ ಮತ್ತು ಗಟ್ಟಿತನ. ಸಮಾಜ ತಿದ್ದುವಲ್ಲಿ, ಸಮಾಜದ ನಿಮ್ನ ವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅವರು ವಹಿಸಿದ ಪಾತ್ರ ಬಹುದೊಡ್ಡದು. ತಮ್ಮ ಈ ಪ್ರಯತ್ನದಲ್ಲಿ ಹಲವಾರು ಅಡೆತಡೆಗಳನ್ನು ಪರೀಕ್ಷೆಗಳನ್ನು ಅವರು ಎದುರಿಸಿದರೂ ತಾವು ನಂಬಿದ ಕಾರ್ಯಗಳನ್ನು ಅಷ್ಟೇ ಗಟ್ಟಿತನದಿಂದ ಅನುಷ್ಠಾನ ಮಾಡಿದರು.


ತನ್ನ ಹುಟ್ಟೂರಾದ ಬಸವನ ಬಾಗೇವಾಡಿಯನ್ನು ತ್ಯಜಿಸಿ ಕೂಡಲಸಂಗಮದಲ್ಲಿ ನೆಲೆನಿಂತು ಸಹಸ್ರಾರು ಮಂದಿಗೆ ಲಿಂಗದೀಕ್ಷೆ ನೀಡಿ ಜಾತಿ-ಮತ-ಲಿಂಗ ತಾರತಮ್ಯ ಹೋಗಲಾಡಿಸಿದರು. ಮನುಷ್ಯನ ನಡೆ ಮತ್ತು ನುಡಿ ಹೇಗಿರಬೇಕು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ನಮಗೆಲ್ಲರಿಗೂ ಮಾದರಿಯಾದರು ಎಂದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಬಸವಣ್ಣ ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಸಮಸ್ತ ಮನುಕುಲಕ್ಕೇ ಸಂಬಂಧಿಸಿದವರು. ಮಾನವೀಯ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಸಾರಿ ಶಿವ ಶರಣರಿಗೆಲ್ಲಾ ಪ್ರೇರಣೆಯಾದವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯನಂಥ ಶಿವಶರಣರು ಬಸವಣ್ಣನವರ ಮುಂದಾಳತ್ವದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸುಧಾರಣೆಯ ಕ್ರಾಂತಿ ಮೂಡಿಸಿದವರು.


ಸಮ ಸಮಾಜ ನಿರ್ಮಾಣದ ಕನಸು ಕಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಹಿಂದೆಯೂ ಬಸವಣ್ಣನವರ ತತ್ವಾದರ್ಶಗಳ ಗಾಢ ಪರಿಣಾಮ ಕಂಡುಬರುತ್ತದೆ. ನಾವೆಲ್ಲರೂ ದ್ವೇಷ-ಅಸೂಯೆ-ವಂಚನೆ ರಹಿತ ಸಮಾಜ ನಿರ್ಮಿಸಿ ಉತ್ತಮ ನಾಗರಿಕರಾಗಬೇಕು ಎಂದರು.


ವಿಶೇಷ ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ನಿರಂಜನ ಯು.ಸಿ., ಅನುಭವ ಮಂಟಪದಲ್ಲಿ ಶಿವಶರಣರೆನ್ನೆಲ್ಲಾ ಒಟ್ಟುಗೂಡಿಸಿ ತಮ್ಮ ಜೀವನದ ಅನುಭೂತಿಗಳನ್ನು ಪರಾಮರ್ಶಿಸಿ ವಚನಗಳ ಮೂಲಕ ಸಮಾನತೆಯ ಸಾರ ಬೋಧಿಸಿ ಸಮಾಜದ ವೈರುಧ್ಯಗಳನ್ನು ತಿದ್ದಿದರು. ಸಮಾಜದ ವಿರೋಧವನ್ನೂ ಲೆಕ್ಕಿಸದೆ ಅಂತರ್ಜಾತೀಯ ವಿವಾಹವನ್ನು ಪ್ರೋತ್ಸಾಹಿಸಿ ಜಾತಿಯ ಬೇಲಿಗಳನ್ನು ಕಿತ್ತೊಗೆದರು. ತಮ್ಮ ಕುಲಕಸುಬು, ಕುಲದೇವತೆಗಳ ಹೆಸರನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳುವ ಮೂಲಕ ಯಾವುದೇ ಕೆಲಸ ಕೀಳಲ್ಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಅದು ಕೈಲಾಸವನ್ನು ಸೇರುವ ದಾರಿಯಾಗುತ್ತದೆ ಎಂದು ಸಾರಿದರು ಎಂದರು.


ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಉಡುಪಿ ಬಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಎಸ್.ಚಂದ್ರಶೇಖರ್, ಅಧ್ಯಕ್ಷ ಗಂಗಾಧರ್ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಆದರ್ಶ ಆಸ್ಪತ್ರೆಯ ಅನುಶ್ರೀ ನಿರೂಪಿಸಿದರು.