ಲೋಕಬಂಧು ನ್ಯೂಸ್ ಪಡುಬಿದ್ರಿ, ಏ.29
ಸಮಗ್ರವಾಗಿ ಜೀಣೋದ್ಧಾರಗೊಂಡ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪುನಃಪ್ರತಿಷ್ಠೆ ಶ್ರೀಕ್ಷೇತ್ರದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಬುಧವಾರ ನಡೆಯಿತು.ಆ ಪ್ರಯುಕ್ತ ಅಷ್ಟೋತ್ತರ ಗಣಯಾಗ, ಮಹಾರುದ್ರಯಾಗ, ಪ್ರತಿಷ್ಠಾ ಯಾಗ, ಪೀಠಿಕಾಯಾಗ, ಶಕ್ತಿಯಾಗ ನಡೆದಿದ್ದು, ಸುಮಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ನಡೆಸಲಾಯಿತು.
ಬಳಿಕ ಆಷ್ಟಬಂಧ ಲೇಪನ, ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರತಿಜ್ಞಾ ವಿಧಿ, ಮಹಾಪೂಜೆ, ಗಣಪತಿ ದೇವರ ಶುದ್ದಿ ಪ್ರಕ್ರಿಯಾದಿಗಳು ನೆರವೇರಿತು.
ಸಂಸ್ಥಾನ ಪೂಜೆ
ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯಸಾನಿಧ್ಯ ಮತ್ತು ಸಂಸ್ಥಾನ ಪೂಜೆ ನಡೆಯಿತು.
ಮುಂಬೈ ಸಮಿತಿಯಿಂದ ಅನ್ನಸಂತರ್ಪಣೆ
ಆನಂತರದಲ್ಲಿ ಪಲ್ಲಪೂಜೆ ನಡೆದು ಜೀರ್ಣೋದ್ಧಾರ ಮುಂಬೈ ಸಮಿತಿ ವತಿಯಿಂದ ಮಹಾ ಅನ್ನಸಂತರ್ಪಣೆ ನಡೆಯಿತು.
ವಿವಿಧ ಧಾರ್ಮಿಕ ವಿಧಿ-ವಿಧಾನ
ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನ ನೆರವೇರಿತು. ಸಂಜೆ ಅಷ್ಟದಿಕ್ಪಾಲ, ಬಲಿಶಿಲಾ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ, ಧ್ವಜಾಧಿವಾಸ, ದುರ್ಗಾರಾಧನೆ, ಮುಹೂರ್ತ ಬಲಿ, ರಾತ್ರಿ ಪೂಜೆ, ಗಣಪತಿ ದೇವರ ಬಿಂಬ ಶಯ್ಯಾ ಕಲ್ಪನೆ, ಶಿರಸ್ತತ್ವಯಾಗ, ಅಧಿವಾಸಯಾಗ, ನಪುಂಸಕ ಶಿಲಾನ್ಯಾಸ, ರತ್ನನ್ಯಾಸಯಾಗ, ಭದ್ರಕಮಂಡಲ ಪೂಜೆ, ದುರ್ಗಾರಾಧನೆ ನೆರವೇರಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ದಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕೊರ್ನಾಯ ಪದ್ಮನಾಭ ರಾವ್, ಆನುವಂಶಿಕ ಮೊತ್ತೇಸರ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಎಚ್.ಪದ್ಮನಾಭ ಭಟ್ ಮತ್ತು ವೈ.ಗುರುರಾಜ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿನಾಥ ಶೆಟ್ಟಿ ಮೊದಲಾದವರಿದ್ದರು.