ಜಿಲ್ಲಾಸ್ಪತ್ರೆ ಕಟ್ಟಡ ಶೀಘ್ರ ಉದ್ಘಾಟಿಸದಿದ್ದಲ್ಲಿ ಪ್ರತಿಭಟನೆ

ಲೋಕಬಂಧು ನ್ಯೂಸ್ | ಉಡುಪಿ, ಏ.7
2021ರಲ್ಲಿ ಆರಂಭಗೊಂಡಿರುವ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನು 15-20 ದಿನಗಳೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡದಿದ್ದಲ್ಲಿ ಜನರ ಸಹಭಾಗಿತ್ವದೊಂದಿಗೆ ಪ್ರತಿಭಟನೆ ನಡೆಸಬೇಕಾದೀತು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆಸ್ಪತ್ರೆ ಕಟ್ಟಡದ ಶೇ. 90ರಷ್ಟು ಕಾಮಗಾರಿ ಮೂರು ವರ್ಷದ ಹಿಂದೆ ಪೂರ್ಣವಾಗಿದ್ದರೂ ಉದ್ಘಾಟಿಸುವ ಮೂಲಕ ಜನಸೇವೆಗೆ ನೀಡಲು ರಾಜ್ಯ ಸರಕಾರ ಇಚ್ಛಾಶಕ್ತಿ ತೋರಿಸಿಲ್ಲ. ಉಡುಪಿ ಜಿಲ್ಲೆಯಾಗಿ 29 ವರ್ಷ ಕಳೆದರೂ ಕೇವಲ 120 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿಯೇ ಉಳಿದಿದೆ. ಹಾಸಿಗೆ, ಐಸಿಯು ಇತ್ಯಾದಿಗಳಿಗಾಗಿ ರೋಗಿಗಳು ಹೋರಾಡುವ, ಆ್ಯಂಬುಲೆನ್ಸ್'ನಲ್ಲೇ ಪ್ರಾಣ ಬಿಡುವ ದಯನೀಯ ಪರಿಸ್ಥಿತಿ ಇದೆ. ಜಿಲ್ಲಾ ಸರಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿ ತುರ್ತಾಗಿ ಪೂರೈಸಿ, ಆಸ್ಪತ್ರೆಗೆ ಬೇಕಾದ ಉಪಕರಣ ಖರೀದಿಗೆ ಸೂಕ್ತ ಅನುದಾನ ಒದಗಿಸಬೇಕು. ವೈದ್ಯರು, ಸಿಬ್ಬಂದಿ ಹುದ್ದೆ ಭರ್ತಿಗೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಆಗ್ರಹಿಸಿದರು.


ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುತ್ತಿರುವ ಮಾಸಾಶನ ನಿಲ್ಲಿಸದೇ, ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 32 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗೆ ಹೆಚ್ಚಿಸಬೇಕು. ಅವೈಜ್ಞಾನಿಕ, ಬಡವರ ವಿರೋಧಿ ನಿರ್ಧಾರದಿಂದ ರಾಜ್ಯದಲ್ಲಿ 24 ಲಕ್ಷ ಹಾಗೂ ಉಡುಪಿ  ಜಿಲ್ಲೆಯ 50 ಸಾವಿರ ಮಂದಿ ಪಿಂಚಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.


ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಮೂರು ವರ್ಷಗಳಿಂದ ಅಧಿಕಾರಿ, ಸಿಬ್ಬಂದಿ ಕೊರತೆ ನೆಪವೊಡ್ಡಿ ಬಾಕಿ ಕಡತ ವಿಲೇವಾರಿ ಮಾಡದೆ ಜನರನ್ನು ಅಲೆದಾಡಿಸಲಾಗುತ್ತಿದೆ. ಸರಕಾರ ನೀಡಿದ ನಿವೇಶನದಲ್ಲಿ ಮನೆ ಕಟ್ಟಲೂ ಪರವಾನಗಿ ಸಿಗುತ್ತಿಲ್ಲ. ಸಾವಿರಾರು ಅರ್ಜಿಗಳಿಗೆ ಹಿಂಬರಹ ನೀಡಿ, ಕಡತ ಮುಕ್ತಾಯದ ಹೊಸ ಸಂಪ್ರದಾಯಕ್ಕೆ ಪ್ರಾಧಿಕಾರ ಮುಂದಾಗಿದೆ ಎಂದರು.


ಬಡವರ ಬದುಕಿನಲ್ಲಿ ರಾಜ್ಯ ಸರ್ಕಾರದ ಚೆಲ್ಲಾಟ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ದಿಕ್ಕು ದೆಸೆ ಇಲ್ಲದ ದುರಾಡಳಿತ, ಆಡಳಿತ ವೈಫಲ್ಯದಿಂದ ಜನ ಸಾಮಾನ್ಯರ ಗೋಳು ಕೇಳುವವರಿಲ್ಲದಂತಾಗಿದೆ. ರಾಜ್ಯ ಸರಕಾರ ಬಡವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆರೋಪಿಸಿದರು‌.


ದಾಖಲೆಗಳ ಕೊರತೆ, ಡೀಮ್ಡ್ ಫಾರೆಸ್ಟ್, ಕುಮ್ಕಿ ಮತ್ತಿತರ ಕಾರಣ ನೀಡಿ ಹಕ್ಕು ಪತ್ರ ನೀಡದೆ ಬಡ ಕುಟುಂಬಗಳನ್ನು ನಡುದಾರಿಯಲ್ಲಿ ಕೈಬಿಡಲಾಗುತ್ತಿದೆ. ರಾಜ್ಯ ಸರಕಾರ ಬಿಪಿಎಲ್ ಪಡಿತರ ಚೀಟಿಗಳನ್ನು ಮೂರು ವರ್ಷಗಳಿಂದ ನೀಡುತ್ತಿಲ್ಲ, ಬಡವರಿಗೆ ನಿವೇಶನವೂ ಮೂರು ವರ್ಷದಿಂದ ಸಿಗುತ್ತಿಲ್ಲ.


ರಾಜ್ಯ ಸರಕಾರ ಉಡುಪಿ ಜಿಲ್ಲೆಯ ಮೂಲಭೂತ ಸೌಕರ್ಯಕ್ಕೆ ತುರ್ತು ಸ್ಪಂದನೆ ನೀಡಬೇಕು. ಉಡುಪಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ, ಆಯುಕ್ತರ ನಡುವೆ ಹೊಂದಾಣಿಕೆ ಇಲ್ಲ. ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಯಶಪಾಲ್ ಸುವರ್ಣ ದೂರಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.