ಜಗಜೀವನರಾಮ್ ವ್ಯಕ್ತಿತ್ವ ಅಳವಡಿಸಿಕೊಳ್ಳಿ

ಲೋಕಬಂಧು ನ್ಯೂಸ್ | ಉಡುಪಿ, ಏ.6
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ದೇಶದ ರಕ್ಷಣಾ ಮಂತ್ರಿಯಾಗಿ 1971ರ ಭಾರತ-ಪಾಕಿಸ್ತಾನ ಯುದ್ಧ ಸಮಯದಲ್ಲಿ ಭಾರತಕ್ಕೆ ಐತಿಹಾಸಿಕ ಜಯ ಗಳಿಸಿಕೊಟ್ಟಿರುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ತಮ್ಮ ಧೀಮಂತ ವ್ಯಕ್ತಿತ್ವದಿಂದ ಬಾಂಗ್ಲಾ ವಿಮೋಚನೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಅಂಥ ಮಹಾನ್ ನಾಯಕರ ಉದಾತ್ತ ಗುಣಗಳು ನಮಗೆಲ್ಲರಿಗೂ ಮಾದರಿಯಾಗಿದ್ದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಭಾನುವಾರ ನಡೆದ ಡಾ.ಬಾಬು ಜಗಜೀವನರಾಮ್ 119ನೇ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.


ಬಾಬೂಜಿ ದಕ್ಷತೆಗೆ ಹೆಸರುವಾಸಿಯಾಗಿದ್ದರು. ಐದು ದಶಕಗಳ ತಮ್ಮ ರಾಜಕೀಯ ಜೀವನದ ಇತಿಹಾಸದಲ್ಲಿ ಸುದೀರ್ಘ ಮೂವತ್ತು ವರ್ಷ ಕಾಲ ಸಚಿವ ಸಂಪುಟದಲ್ಲಿದ್ದು ಕೃಷಿ, ಕಾರ್ಮಿಕ, ಕೈಗಾರಿಕೆ, ಸಾರಿಗೆ ಮತ್ತು ರೈಲ್ವೆ ಹೀಗೆ ಹಲವು ಇಲಾಖೆಗಳಲ್ಲಿ ಕೆಲಸ ನಿರ್ವಹಿಸಿ ಮಹತ್ತರ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರಂತೆ ಬಾಬೂಜಿ ಜೀವನ ಮತ್ತು ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ದೇಶದ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆಯನ್ನು ಸಮತಾ ದಿವಸ್ ಎಂದು ಆಚರಿಸುತ್ತೇವೆ. ಜಾತಿ-ಮತ, ಮೇಲು-ಕೀಳುಗಳ ತಾರತಮ್ಯದಿಂದ ಮುಕ್ತವಾದ ಸಮಾನತೆಯ ಸಮಾಜ ನಿರ್ಮಿಸಲು ಬಾಬೂಜಿ ಅವಿರತ ಶ್ರಮಿಸಿದ್ದರು.


ದಲಿತರ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಕೈಗೊಂಡ ಸಂಘಟನಾತ್ಮಕ ಕಾರ್ಯಗಳು ಇಂದಿಗೂ ಪ್ರಸ್ತುತ. ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಉನ್ನತಿ ಸಾಧ್ಯ ಎನ್ನುವುದನ್ನು ಅವರು ಸಾಧಿಸಿ ತೋರಿಸಿದ್ದಾರೆ. ನಾವು ಕೇವಲ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬದುಕದೆ  ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎನ್ನುವುದನ್ನು ಕಲಿಸಿದ್ದಾರೆ ಎಂದರು.


ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ವಿಶೇಷ ಉಪನ್ಯಾಸ ನೀಡಿದರು.


ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ಶ್ರೀದೇವಿ ನಿರೂಪಿಸಿ, ವಂದಿಸಿದರು.