ಲೋಕಬಂಧು ನ್ಯೂಸ್ ಮೈಸೂರು, ಏ.6
ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯನವರೇ ಇನ್ನೂ ಎರಡು ವರ್ಷ ಇರುತ್ತಾರೆ. 2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ಐದು ವರ್ಷ ಸಿಎಂ ಆಗಿದ್ದರು ತಾನೇ? ಈ ಬಾರಿಯೂ 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028. ಅದನ್ನು ಮುಗಿಸಬೇಕು ತಾನೇ? ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎಂದರು.
ಹೈಕಮಾಂಡ್ ಯಾವ ಗೊಂದಲಗಳನ್ನೂ ಸೃಷ್ಟಿ ಮಾಡಿಲ್ಲ. ಯಾರು ಏನೇ ಹೇಳಿದರೂ ಅದು ಮುಖ್ಯ ಅಲ್ಲ. ಹೈಕಮಾಂಡ್ ಯಾವತ್ತಾದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದೆಯಾ ಎಂದು ಪ್ರಶ್ನಿಸಿದ ಪರಮೇಶ್ವರ್, ಯಾವತ್ತಾದರೂ ಬದಲಾವಣೆ ಬಗ್ಗೆ ಮಾತನಾಡಿದ್ದಾರಾ? ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆ ಇಲ್ಲ ಎಂದು.
ಸಿಎಂ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಹೈಕಮಾಂಡ್ ಯಾವತ್ತಾದರೂ ಆ ಬಗ್ಗೆ ಮಾತನಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಅಲ್ಲಿಯ ವರೆಗೆ ಯಾರು ಏನೇ ಮಾತನಾಡಿದರೂ ಅದು ವೈಯಕ್ತಿಕ ಅಭಿಪ್ರಾಯ ಎಂದು ಡಾ.ಪರಮೇಶ್ವರ್ ಹೇಳಿದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಡಿಸಿಎಂ ಆಗಿದ್ದಾರೆ, ಅವರು ನಮ್ಮ ನಾಯಕರು. ಅವರಿಗೆ ಯಾವ ಸಮಸ್ಯೆಯೂ ಆಗಿಲ್ಲ. ಸಿಎಂ ವಿಧಾನಸಭೆಯಲ್ಲೇ ಹೇಳಿದ್ದಾರೆ, ನಮ್ಮ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂದು ಹೇಳಿದ್ದಾರೆ. ಅದರಲ್ಲಿ ನಾನು ಅರ್ಹ ಇನ್ನೊಬ್ಬರು ಅನರ್ಹ ಎಂಬ ಪ್ರಶ್ನೆಯೇ ಬರುವುದಿಲ್ಲ.
ಉಪಚುನಾವಣೆ ಫಲಿತಾಂಶಕ್ಕೂ ಬೇರೆ ವಿಚಾರಕ್ಕೆ ಸಂಬಂಧವೇ ಇಲ್ಲ ಎಂದರು.
ದಿಕ್ಸೂಚಿ ಅಲ್ಲ
ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಸೂಚಿ ಅಲ್ಲ. ಉಪಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ನೀಡುವ ಮಾರ್ಕ್ಸ್ ಕೂಡಾ ಅಲ್ಲ. ಅದರ ಫಲಿತಾಂಶದ ಮೇಲೆ ಯಾವ ಬದಲಾವಣೆಯೂ ಆಗುವುದಿಲ್ಲ. ಎರಡು ಕ್ಷೇತ್ರದಲ್ಲೂ ನಾವು ಗೆಲ್ಲುತ್ತೇವೆ. ಜನ ನಮ್ಮ ಪರವಾಗಿ ತೀರ್ಪು ಕೊಡುತ್ತಾರೆ. ಗ್ಯಾರೆಂಟಿ ಯೋಜನೆಗಳನ್ನು ಮೀರಿಯೂ ಈ ಸರ್ಕಾರದ ಆಡಳಿತ ದಕ್ಷತೆಗೆ ಜನ ಮತ ಹಾಕುತ್ತಾರೆ.
ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಜನ ನಮ್ಮ ಪರವಾಗಿ ಇದ್ದಾರೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಅವಹೇಳನ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮಗೆ ನಮ್ಮದೇ ಅದ ಸಂಸ್ಕಾರ ಇದೆ. ನಾವು ವೈಯಕ್ತಿಕವಾಗಿ ಅನಗತ್ಯ ನಿಂದನೆ, ಕೆಟ್ಟ ಪದ ಬಳಕೆ ಮಾಡಬಾರದು. ಸದನ್ನೆಲ್ಲ ಸಮಾಜ ಗಮನಿಸುತ್ತಾ ಇರುತ್ತದೆ. ಈ ರೀತಿಯ ನಡವಳಿಕೆ ಸರಿಯಲ್ಲ. ಹೊರಗೆ ಜನ ನಮ್ಮನ್ನು ಹೇಗೆ ನೋಡುತ್ತಾರೆ ಹೇಳಿ ಎಂದು ಪ್ರಶ್ನಿಸಿದರು.