ಉಡುಪಿ ನೂತನ ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಪೀಠಾರೋಹಣ

ಲೋಕಬಂಧು ನ್ಯೂಸ್ | ಉಡುಪಿ, ಏ.20
ಉಡುಪಿ ಕ್ರೈಸ್ತ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷ (ಬಿಷಪ್)ರಾಗಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರನ್ನು ಸೋಮವಾರ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನ ಚರ್ಚ್ ಬಳಿಯ ಕಾಲೇಜು ಮೈದಾನದಲ್ಲಿ ನಡೆದ ಅದ್ದೂರಿ ಪವಿತ್ರ ಸಮಾರಂಭದಲ್ಲಿ ಪಟ್ಟಾಭಿಷಿಕ್ತರಾಗಿಸಿ ಪೀಠಾರೋಹಣ ಮಾಡಲಾಯಿತು.
ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಹಾಗೂ ಎಫ್.ಎ.ಬಿ.ಸಿ ಮತ್ತು ಸಿಸಿಇಐ ಅಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಪಟ್ಟಾಭಿಷೇಕದ ವಿಧಿ-ವಿಧಾನ ನೆರವೇರಿಸಿದರು.


ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕರಾಗಿ ಭಾಗವಹಿಸಿದ್ದರು. ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ, 30ಕ್ಕೂ ಅಧಿಕ ಧರ್ಮಾಧ್ಯಕ್ಷರು, ಸುಮಾರು 250 ಮಂದಿ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 6 ಸಾವಿರಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಪೋಪ್ ಅವರ ಅಧಿಕೃತ ನೇಮಕಾತಿ ಪತ್ರ ವಾಚಿಸಲಾಯಿತು.


ನಂತರ ಪವಿತ್ರ ಧಾರ್ಮಿಕ ವಿಧಿಗಳೊಂದಿಗೆ ಧರ್ಮಾಧ್ಯಕ್ಷರ ಪಟ್ಟಾಭಿಷೇಕ ನಡೆಯಿತು.


ನೂತನ ಬಿಷಪ್ ಅವರಿಗೆ ಪವಿತ್ರ ತೈಲ ಹಚ್ಚಿದ ಬಳಿಕ ಪವಿತ್ರ ಬೈಬಲ್'ನ್ನು ಶಿರದ ಮೇಲಿರಿಸಿ ಪ್ರಾರ್ಥಿಸಲಾಯಿತು. ಅಧಿಕಾರದ ಉಂಗುರ ಧಾರಣೆ, ಶಿರವಸ್ತ್ರ ಮತ್ತು ದಂಡವನ್ನು ಹಸ್ತಾಂತರಿಸಿ ಅಧಿಕೃತ ಪೀಠದಲ್ಲಿ ಕುಳ್ಳಿರಿಸಲಾಯಿತು. ಆ ಮೂಲಕ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ನಡೆಸಿ, ಅಧಿಕೃತವಾಗಿ ಘೋಷಿಸಲಾಯಿತು.


ಧರ್ಮಪ್ರಾಂತ್ಯದ ಚಾನ್ಸಲರ್ ಫಾ.ಸ್ಟೀವನ್ ಡಿ'ಸೋಜ ಅವರು ಪೋಪ್ ಅವರ ಅಧಿಕೃತ ಪತ್ರ ವಾಚಿಸಿದರು. ಮುಖ್ಯ ಅಭಿಷೇಕಕರರು, ಸಹ ಅಭಿಷೇಕಕರರು, ಇತರ ಧರ್ಮಾಧ್ಯಕ್ಷರು ಹಾಗೂ ಪ್ರತಿನಿಧಿಗಳು ಶಾಂತಿಯ ಸಂಕೇತವನ್ನು ವಿನಿಮಯ ಮಾಡಿಕೊಂಡರು.


ಮಂಗಳೂರು ಬಿಷಪ್ ಡಾ.ಪೀಟರ್ ಪಾಲ್ ಸಲ್ಡಾನಾ ತಮ್ಮ ಪ್ರವಚನದಲ್ಲಿ, ತಂದೆಯ ಆಶೀರ್ವಾದ ಅಮೂಲ್ಯ. ಇಂದಿನ ಸಮಾಜದಲ್ಲಿ ಹಲವಾರು ಕುಟುಂಬಗಳಲ್ಲಿ ತಂದೆಯ ಉಪಸ್ಥಿತಿ ಕಾಣುವುದಿಲ್ಲ. ದೇವರ ಕುಟುಂಬದಲ್ಲಿ ಧರ್ಮಾಧ್ಯಕ್ಷರು ಪರಮಪಿತನ ಪ್ರತಿನಿಧಿ. ವಂ.ಲೆಸ್ಲಿ ಅವರ ಮೂಲಕ ದೇವರು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯಕ್ಕೆ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಾನೆ. ಧರ್ಮಾಧ್ಯಕ್ಷರು ದೇವರ ವಾಕ್ಯವನ್ನು ಭಕ್ತರಲ್ಲಿ ಬಿತ್ತಬೇಕು ಹಾಗೂ ಎಲ್ಲರನ್ನೂ ಪ್ರೀತಿಯಿಂದ ನಡೆಸಬೇಕು. ಸುವಾರ್ತೆಯ ಸಾರವನ್ನು ಸಾರುವುದು ಪ್ರಮುಖ ಕರ್ತವ್ಯ ಎಂದರು.


ಪೀಠಾರೋಹಣದ ವಿಧಿವಿಧಾನಗಳ ಬಳಿಕ ನಡೆದ ಸಾರ್ವಜನಿಕ ಅಭಿನಂದನ ಸಮಾರಂಭದಲ್ಲಿ ಧರ್ಮಪ್ರಾಂತ್ಯದ ಪರವಾಗಿ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ಧರ್ಮಾಧ್ಯಕ್ಷರನ್ನು ಗೌರವಿಸಿದರು.


ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ ಆಶೀರ್ವಚನ ನೀಡಿ, ಧರ್ಮಾಧ್ಯಕ್ಷರು ಭಕ್ತರಿಗೆ ಮಾರ್ಗದರ್ಶನ ಮಾಡಲು ಮತ್ತು ಸಲಹಲು ವಿಶೇಷವಾಗಿ ಆಯ್ಕೆಗೊಂಡವರು. ಧರ್ಮಸಭೆ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಧರ್ಮಗುರುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ನೂತನ ಧರ್ಮಾಧ್ಯಕ್ಷರಿಗೆ ಇಂಥ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಹೊಣೆಗಾರಿಕೆ ಇದ್ದು ಉಡುಪಿ ಧರ್ಮಕ್ಷೇತ್ರವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.


ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಸಂದೇಶ ನೀಡಿ, ಅಪೋಸ್ತಲರ ಉತ್ತರಾಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಾಧ್ಯಕ್ಷ ಲೆಸ್ಲಿ ಅವರ ಶೈಕ್ಷಣಿಕ ಹಿನ್ನೆಲೆ, ಪಾಸ್ಟರಲ್ ಅನುಭವ ಹಾಗೂ ಸರಳ ಜೀವನ ಶೈಲಿ ಧರ್ಮಪ್ರಾಂತ್ಯವನ್ನು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಏಕತೆಯ ದಿಕ್ಕಿನಲ್ಲಿ ಮುನ್ನಡೆಸಲಿದೆ ಎಂದರು.


ಧರ್ಮಪ್ರಾಂತ್ಯಕ್ಕೆ ನೀಡಿದ ಸೇವೆಗಾಗಿ ನಿವೃತ್ತ ಬಿಷಪ್ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಗೌರವಿಸಲಾಯಿತು.


ಸರ್ವಧರ್ಮ ಸಮನ್ವಯತೆಗೆ ಒಂದಾಗೋಣ
ನೂತನ ಬಿಷಪ್ ವಂ.ಡಾ.ಲೆಸ್ಲಿ ಡಿ'ಸೋಜ ಮಾತನಾಡಿ ದೇವರು, ತಮ್ಮ ಕುಟುಂಬ, ಗುರುಗಳು ಹಾಗೂ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿರುವ ಸವಾಲುಗಳನ್ನು ಸಮ್ಮತಿಸಿದ ಅವರು ದೈವಿಕ ಕೃಪೆಯ ಮೇಲೆ ನಂಬಿಕೆ ವ್ಯಕ್ತಪಡಿಸಿದರು. ನಾನು ನನ್ನ ಶಕ್ತಿಯಿಂದಲ್ಲ, ದೇವರ ಮೇಲಿನ ನಂಬಿಕೆಯಿಂದ ಬರುತ್ತಿದ್ದೇನೆ. ನಾವೆಲ್ಲರೂ ಸೇರಿ ಪ್ರೀತಿ, ಸೇವೆ ಮತ್ತು ಸತ್ಯದ ಮೇಲೆ ನೆಲೆಗೊಂಡ ಚರ್ಚುಗಳನ್ನು ನಿರ್ಮಿಸೋಣ ಎಂದರು. ಉಡುಪಿ ಜಿಲ್ಲೆಯಲ್ಲಿ ಸರ್ವಧರ್ಮ ಸಮನ್ವಯತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಸ್ಪರ ಏಕ ಮನಸ್ಸಿನಿಂದ ಕಾರ್ಯಪ್ರವೃತ್ತರಾಗೋಣ ಎಂದರು.


ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಅಭಯಚಂದ್ರ ಜೈನ್, ಮಾಜಿ ಶಾಸಕರಾದ ರಘುಪತಿ ಭಟ್ ಮತ್ತು ಜೆ.ಆರ್. ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಮೊದಲಾದವರಿದ್ದರು.


ವಂ.ಫಡರ್ಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ವಂ.ರೋಶನ್ ಡಿ'ಸೋಜ ವಂದಿಸಿದರು. ವಂ.ವಿಲ್ಸನ್ ಡಿ'ಸೋಜ ಧಾರ್ಮಿಕ ವಿಧಿ-ವಿಧಾನಗಳ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ವಂ.ಡೆನಿಸ್ ಡೆಸಾ ನೆರವೇರಿಸಿದರು.