ಲೋಕಬಂಧು ನ್ಯೂಸ್ | ಉಡುಪಿ, ಏ.10
ಇಲ್ಲಿನ ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳು ಇತರ ಸಂಘಟನೆಗಳಿಗೆ ಮಾದರಿ ಎಂದು ಕೋಟ ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ. ಕುಂದರ್ ಹೇಳಿದರು.
ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ವತಿಯಿಂದ ಭೀಮ ಗೋಲ್ಡ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುವ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕಲಾರಂಗ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಿಗೆ ತನ್ನನ್ನೇ ಸಮರ್ಪಿಸಿಕೊಂಡಿದೆ. ಯಕ್ಷಗಾನ ಕಲೆ- ಕಲಾವಿದರ ಕ್ಷೇಮಚಿಂತನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಯಕ್ಷಗಾನ ಕಲಿಕೆ ಇತ್ಯಾದಿಗಳ ಬಗ್ಗೆ ಸಂಸ್ಥೆ ಮಾಡುತ್ತಿರುವ ಕಾರ್ಯ ಅಸಾಧಾರಣವಾದುದು. ಪರಿಶ್ರಮದ ದುಡಿಮೆ ಮತ್ತು ಪಾರದರ್ಶಕ ವ್ಯವಹಾರದಿಂದ ಈ ಸಂಸ್ಥೆ ಸಮಾಜದ ಮನ್ನಣೆಗೆ ಪಾತ್ರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಹಕಾರದಿಂದ ಯಕ್ಷಶಿಕ್ಷಣ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಅಭ್ಯಾಗತರಾಗಿದ್ದ ಉದ್ಯಮಿ ಪಿ. ನಟರಾಜ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಶೆಟ್ಟಿ ಮತ್ತು ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು. ಸಂಸ್ಥೆ ಉಪಾಧ್ಯಕ್ಷ ಎಸ್.ವಿ.ಭಟ್, ಟ್ರಸ್ಟಿ ಮೀನಾ ಲಕ್ಷಣಿ ಅಡ್ಯಂತಾಯ, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ, ಯಕ್ಷಶಿಕ್ಷಣ ಗುರುಗಳಾದ ಮಹೇಶ ಮಂದಾರ್ತಿ ಮತ್ತು ನಿತ್ಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾದ ಯು. ವಿಶ್ವನಾಥ ಶೆಣೈ, ಕೆ. ಸದಾಶಿವ ರಾವ್, ಅನಂತರಾಜ ಉಪಾಧ್ಯಾಯ, ಕಿಶೋರ್ ಸಿ. ಉದ್ಯಾವರ, ನಟರಾಜ ಉಪಾಧ್ಯಾಯ, ಎ. ಅಜಿತ್ ಕುಮಾರ್ ಮತ್ತು ಅಶೋಕ ಎಂ. ಸಹಕರಿಸಿದರು.
ಸಂಸ್ಥೆ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾ ಪ್ರಸಾದ್ ವಂದಿಸಿದರು. ನಿರಂಜನ ಭಟ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 104 ವಿದ್ಯಾರ್ಥಿಗಳು ಭಾಗವಹಿಸಿದ್ದು, ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ನರಸಿಂಹ ತುಂಗ, ಲಂಬೋದರ ಹೆಗಡೆ, ಶ್ರೀಧರ ಹೆಗಡೆ, ಮನೋಜ್, ಆದ್ಯತಾ ಭಟ್, ಶಿಶಿರ, ಪ್ರಶಾಂತ, ಶ್ರುತಿ, ಕಾರ್ತಿಕ್ ಭಟ್ ಸಹಕರಿಸಲಿದ್ದಾರೆ. ಶಿಬಿರಾರ್ಥಿಗಳಿಗೆ ನೃತ್ಯ, ಅಭಿನಯ, ಮುಖವರ್ಣಿಕೆ, ವೇಷಭೂಷಣ ತರಬೇತಿಯೊಂದಿಗೆ ಯಕ್ಷಗಾನದ ಕುರಿತ ಹಲವು ಮಾಹಿತಿ ನೀಡಲಾಗುವುದು.