ಮಕ್ಕಳನ್ನು ದೇವಸ್ಥಾನಗಳಿಗೆ ಕರೆತನ್ನಿ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 3
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಅವರನ್ನು ದೇವಸ್ಥಾನಗಳಿಗೆ ಕರೆತಂದು ಅಲ್ಲಿನ ಪವಿತ್ರ ವಾತಾವರಣವನ್ನು ಪರಿಚಯಿಸುವುದು ಮುಖ್ಯ. ಸನಾತನ ಧರ್ಮದ ಸಂಸ್ಕೃತಿ, ಮೌಲ್ಯಗಳು ಮತ್ತು ಆಚಾರಗಳನ್ನು ಬಾಲ್ಯದಿಂದಲೇ ತಿಳಿಸುವುದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿ ಹೇಳಿದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ಆಶೀರ್ವಚನ ನೀಡಿದರು.


ಜೀರ್ಣೋದ್ದಾರಗೊಂಡು ಅತ್ಯಂತ ಸುಂದರವಾಗಿ ಪುನರ್‌ ನಿರ್ಮಾಣಗೊಂಡಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಭಕ್ತರ ಸಹಕಾರ ಹಾಗೂ ನಿಪುಣ ಶಿಲ್ಪಿಗಳ ಕೈಚಳಕದಿಂದ ಭವ್ಯವಾಗಿ ಮೂಡಿಬಂದಿದೆ.


ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರ ಅನೇಕ ಶತಮಾನಗಳಿಂದ ಭಕ್ತರಿಗೆ ಅನುಗ್ರಹ ನೀಡುತ್ತಾ ಬಂದಿದೆ. ಭಗವಂತನ ಕೃಪೆ ಪಡೆಯಲು ದೇವಾಲಯದ ಸನ್ನಿಧಿಯನ್ನು ಶ್ರದ್ಧೆಯಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ಮನೆಗಿಂತಲೂ ಹೆಚ್ಚಿನ ಶ್ರದ್ಧೆ ಮತ್ತು ಭಕ್ತಿಯಿಂದ ದೇವಸ್ಥಾನದ ನಿರ್ಮಾಣ ಹಾಗೂ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಪೂಜೆ, ಉತ್ಸವಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯವಾಗಿದೆ.


ಈ ರೀತಿ ದೇವಸ್ಥಾನ ಕೇವಲ ಆರಾಧನೆಯ ಕೇಂದ್ರವಾಗಿ ಅಲ್ಲದೆ, ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ಪವಿತ್ರ ಸ್ಥಳವಾಗಿಯೂ ಪರಿಣಮಿಸುತ್ತದೆ ಎಂದರು.


ಜಗದ್ಗುರು ಶ್ರೀ ಶಂಕರಾಚಾರ್ಯರು ಎಲ್ಲರಿಗೂ ಅನ್ವಯಿಸುವ ಉಪದೇಶ ನೀಡಿದ್ದು, ಹಿಂದೂ ಧರ್ಮದ ರಕ್ಷಣೆಗಾಗಿ ಅವರು ಹಾಕಿದ್ದ ಭದ್ರ ಬುನಾದಿಯ ಪರಿಣಾಮವಾಗಿ ಇಂದಿಗೂ ಸನಾತನ ಹಿಂದೂ ಧರ್ಮ ಉಳಿದಿದೆ. ಹಿಂದೂ ಧರ್ಮದ ಮೇಲೆ ಅನೇಕ ಆಘಾತಗಳು, ಆಕ್ರಮಣಗಳು ನಡೆದರೂ ಅವೆಲ್ಲವನ್ನು ಮೆಟ್ಟಿನಿಲ್ಲುವ ಶಕ್ತಿ ಶ್ರೀ‌ ಶಂಕರಾಚಾರ್ಯರಿಂದಾಗಿ ದೊರೆತಿದೆ ಎಂದರು.


ದೇವಳ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಮುರಳೀನಾಥ್ ಶೆಟ್ಟಿ ದಂಪತಿಯನ್ನು ಸ್ವಾಮೀಜಿ ಗೌರವಿಸಿದರು.


ಬೆಳುವಾಯಿ ದೇವಾನಂದ ಭಟ್ ಸ್ವಾಗತಿಸಿ, ನಿರೂಪಿಸಿದರು. ಪಡುಬಿದ್ರಿ ಕೃಷ್ಣ ಭಟ್ ಬಳಗದವರಿಂದ ವೇದಘೋಷ, ವಿಜಯವಲ್ಲೀ ರಾಜೇಶ್ ಅವರಿಂಸ ಪ್ರಾರ್ಥನೆ ನಡೆಯಿತು.


ಅದಕ್ಕೂ ಮುನ್ನ ಧೂಳಿಪಾದಪೂಜೆ ನಡೆಸಲಾಯಿತು.