ಎಸ್ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ವಂಚಿತರಾಗಬಾರದು

ಲೋಕಬಂಧು ನ್ಯೂಸ್ | ಉಡುಪಿ, ಜೂ.10
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ದ ಹಕ್ಕು. ಇದೀಗ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರ, ಬೂತ್ ಮಟ್ಟದ ಏಜೆಂಟ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಯಾವೊಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗಕೂಡದು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರಗೊಳಿಸುವುದು. ಆದರೆ, ಈ ಪ್ರಕ್ರಿಯೆಯ ಬಗ್ಗೆ ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯ ಉಂಟಾದಲ್ಲಿ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈತಪ್ಪುವುದು, ಹೊಸ ಮತದಾರರು ಸೇರ್ಪಡೆಯಾಗದೆ ಉಳಿಯುವುದು, ಅಗತ್ಯ ತಿದ್ದುಪಡಿಗಳು ಸಕಾಲದಲ್ಲಿ ಆಗದೆ ಉಳಿಯುವುದು ಅಥವಾ ಅನುಮಾನಾಸ್ಪದ ನೋಂದಣಿ ಕುರಿತು ಆಕ್ಷೇಪಣೆ ಸಲ್ಲಿಕೆಯಾಗದಂಥ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ ಎಂದರು.


ಕಾಂಗ್ರೆಸ್ ಪಕ್ಷದ ನಾಯಕತ್ವ ತನ್ನ ಬಿಎಲ್ಓಗಳಿಗೆ ಸಮಗ್ರ ತರಬೇತಿ ನೀಡಿ ಫಾರ್ಮ್ 6, ಫಾರ್ಮ್ 7 ಹಾಗೂ ಫಾರ್ಮ್ 8ರ ಬಳಕೆ, ಕರಡು ಮತದಾರರ ಪಟ್ಟಿ ಪರಿಶೀಲನೆ, ಆಕ್ಷೇಪಣೆ ಸಲ್ಲಿಸುವ ವಿಧಾನ ಮತ್ತು ನಿಗದಿತ ಕಾಲಮಿತಿ ಬಗ್ಗೆ ಸಂಪೂರ್ಣ ತಿಳುವಳಿಕೆ ನೀಡಬೇಕು. ಬೂತ್ ಮಟ್ಟದಲ್ಲಿ ಮನೆ ಮನೆ ಸಂಪರ್ಕ ನಡೆಸಿ ಪ್ರತಿಯೊಬ್ಬ ಮತದಾರರ ಹೆಸರು ಮತ್ತು ವಿವರಗಳನ್ನು ಪರಿಶೀಲಿಸುವ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು.


ಜೂ.30ರಿಂದ ಜು.29ರೊಳಗೆ ಪ್ರತಿಯೊಬ್ಬ ಮತದಾರರು ತಮ್ಮ ಬೂತ್'ನ ಬಿಲ್ಓ ಅವರನ್ನು ಸಂಪರ್ಕಿಸಿ ಎನ್ಯುಮರೇಶನ್'ನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಫಾರ್ಮ್'ನ ಲ್ಲಿ ಕೇಳಲಾಗಿರುವ ವಿವರಗಳನ್ನು ಯಾವುದೇ ತಪ್ಪು ಅಥವಾ ಸುಳ್ಳು ಮಾಹಿತಿಯಿಲ್ಲದೆ ದಾಖಲಿಸುವುದು ಅತ್ಯಂತ ಮುಖ್ಯ. ಅಗತ್ಯ ಸಂದರ್ಭದಲ್ಲಿ 2002ರ ಮತದಾರರ ಪಟ್ಟಿಯಲ್ಲಿನ ಮತದಾರನ ವಿವರ ಅಥವಾ ಆಗ ಆತ ಮತದಾನದ ಹಕ್ಕು ಪಡೆದಿರದಿದ್ದರೆ ಆತನ ತಂದೆ, ತಾಯಿ ಅಥವಾ ಅಜ್ಜ-ಅಜ್ಜಿಯರ ಮತದಾರರ ವಿವರ ಒದಗಿಸಬೇಕಾಗಬಹುದು. ಆದ್ದರಿಂದ ಚುನಾವಣಾ ಆಯೋಗ ಕೇಳುವ 11 ದಾಖಲೆಗಳಲ್ಲಿ ಲಭ್ಯವಿರುವ ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧವಾಗಿಟ್ಟುಕೊಳ್ಳುವಂತೆ ಹೆಗ್ಡೆ ಮನವಿ ಮಾಡಿದರು.


ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ, ಹೆಸರು, ವಿಳಾಸ, ವಯಸ್ಸು, ಫೋಟೋ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ತಪ್ಪು ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಅರ್ಜಿಗಳ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬೇಕು.


ಎಸ್ಐಆರ್ ಪ್ರಕ್ರಿಯೆಯಲ್ಲಿ ಅಗತ್ಯ ಕ್ರಮಗಳನ್ನು ನಿರ್ಲಕ್ಷಿಸಿದರೆ ಮತದಾರರ ಪಟ್ಟಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಭಾಗವಹಿಸಬೇಕು ಎಂದರು.


ಬೂತ್ ಮಟ್ಟದ ಏಜೆಂಟರು ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಶೀಲಿಸಿ, ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ನೆರವಾಗಬೇಕು. ಮೃತರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರ ವಿವರಗಳನ್ನು ನವೀಕರಿಸಬೇಕು. ಅರ್ಹ ಮತದಾರರ ಹೆಸರು ಕೈತಪ್ಪದಂತೆ ಗಮನಹರಿಸಬೇಕು ಹಾಗೂ ಅನುಮಾನಾಸ್ಪದ ಅಥವಾ ಅನರ್ಹ ನೋಂದಣಿಗಳಿದ್ದಲ್ಲಿ ಕಾನೂನುಬದ್ಧವಾಗಿ ಆಕ್ಷೇಪಣೆ ಸಲ್ಲಿಸಬೇಕು.


ಮತದಾರರ ಪಟ್ಟಿಯ ರಕ್ಷಣೆ ಚುನಾವಣಾ ದಿನದ ಕೆಲಸವಲ್ಲ, ಅದು ನಿರಂತರವಾಗಿ ನಡೆಯಬೇಕಾದ ಸಂಘಟನಾ ಕಾರ್ಯ. ಬಲವಾದ ಬಿಎಲ್ಎ ವ್ಯವಸ್ಥೆ, ಜಾಗೃತ ಮತದಾರರು ಮತ್ತು ಸಕಾಲಿಕ ಪರಿಶೀಲನೆ ಮೂಲಕ ಮಾತ್ರ ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡಲು ಸಾಧ್ಯ.


ಚುನಾವಣೆ ಗೆಲ್ಲುವ ಸಿದ್ಧತೆ ಮತದಾನದ ದಿನ ಆರಂಭವಾಗುವುದಿಲ್ಲ, ಅದು ಮತದಾರರ ಪಟ್ಟಿಯ ರಕ್ಷಣೆಯಿಂದ ಆರಂಭವಾಗುತ್ತದೆ. ಆದ್ದರಿಂದ ಗ್ರಾ.ಪಂ., ತಾ.ಪಂ., ಜಿ.ಪಂ., ಪುರಸಭೆ, ಪಟ್ಟಣ ಪಂಚಾಯತ್, ವಿಧಾನಸಭಾ ಹಾಗೂ ಲೋಕಸಭಾ ಅಭ್ಯರ್ಥಿ ಆಕಾಂಕ್ಷಿಗಳು, ಪ್ರತಿಯೊಬ್ಬ ಬಿಎಲ್ಎ, ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪ್ರತಿಯೊಬ್ಬ ಮತದಾರ ಎಸ್ಐಆರ್ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಹಾಗೂ ಮತದಾರರ ಪಟ್ಟಿ ನಿಖರವಾಗಿರುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.