ಲೋಕಬಂಧು ನ್ಯೂಸ್ ಮಂಗಳೂರು, ಜೂ. 7
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸುಮಾರು 900 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಗಮನದಲ್ಲಿದೆ. ಖಾಯಂ ನೇಮಕಾತಿ ಪ್ರಕ್ರಿಯೆ ಆಗುವ ವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಹಂತ ಹಂತವಾಗಿ ಸರ್ಕಾರಿ ಆಸ್ಪತ್ರೆಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒತ್ತುನೀಡುವುದಾಗಿ ತಿಳಿಸಿದರು.
ಎಂಬಿಬಿಎಸ್ ಆದವರು ಸೇವೆ ಸಲ್ಲಿಸಲು ಬಂದರೆ ಅವರಿಗೆ ಡಿಎಚ್‌ಒಗಳು ಒಂದು ವಾರದೊಳಗೆ ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಡಿಎಚ್‌ಒಗಳನ್ನು ಅಮಾನತು ಮಾಡಲಾಗುವುದು. ನೇಮಕ ಆದವರಿಗೆ 60 ಸಾವಿರ ರೂ. ವೇತನ ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಯಾವ ರೀತಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸುವುದಾಗಿ ತಿಳಿಸಿದ ಅವರು, ಈ ನಿಟ್ಟಿನಲ್ಲಿ ರಾತ್ರಿ ವೇಳೆ ಆಸ್ಪತ್ರೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದು, ಅದೇ ರೀತಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡಾ ದಿಢೀರ್ ರಾತ್ರಿ ಪರಿಶೀಲಿಸಲು ಸೂಚಿಸುವುದಾಗಿ ತಿಳಿಸಿದರು.